ಕೋಯಿಕ್ಕೋಡ್ (ಕೇರಳ): ಕೇರಳದಲ್ಲಿ ಏಷ್ಯಾನೆಟ್ ನ್ಯೂಸ್ ಕಚೇರಿಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯಕರ್ತರ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸಹಾಯಕ ಕಮಿಷನರ್ ಶ್ರೇಣಿಯ ಅಧಿಕಾರಿಯ ನೇತೃತ್ವದ ಎಂಟು ಸದಸ್ಯರ ಪೊಲೀಸ್ ತಂಡವು ಕೋಯಿಕ್ಕೋಡ್ನ ಕಚೇರಿಗೆ ತೆರಳಿ ಈ ಶೋಧ ಕಾರ್ಯ ಕೈಗೊಂಡಿದೆ.
ಆಡಳಿತಾರೂಢ ಸಿಪಿಎಂ ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐ ಕಾರ್ಯಕರ್ತರ ಗುಂಪು ಇತ್ತೀಚೆಗೆ ಚಾನೆಲ್ ಕಚೇರಿಗೆ ನುಗ್ಗಿದ್ದರು. ಅಲ್ಲದೇ, ಈ ಕಾರ್ಯಕರ್ತರು ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಚಾನಲ್ನವರು ಪೊಲೀಸರಿಗೆ ದೂರು ಕೂಡ ನೀಡಿದ್ದು, ಇದರ ಆಧಾರದ ಮೇಲೆ ಎಸ್‌ಎಫ್‌ಐನ ಸುಮಾರು 30 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದರ ಮರು ದಿನವೇ ಪೊಲೀಸರು ಚಾನಲ್ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಅಲ್ಲದೇ, ಮಾದಕ ದ್ರವ್ಯ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂಬ ಯುವತಿಯ ಸಂದರ್ಶನ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಕಂಪ್ಯೂಟರ್‌ಗಳಲ್ಲಿನ ಡೇಟಾ ಫೈಲ್‌ಗಳನ್ನೂ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಚಾನಲ್ ಟ್ವೀಟ್ ಮಾಡಿದ್ದು, "ಎಸ್‌ಎಫ್‌ಐ ಗೂಂಡಾಗಿರಿಯ ನಂತರ, ಕೇರಳ ಪೊಲೀಸರು ಏಷ್ಯಾನೆಟ್ ನ್ಯೂಸ್ ಕೋಯಿಕ್ಕೋಡ್ ಕಚೇರಿಯಲ್ಲಿ 'ಶೋಧ' ಮಾಡಿದ್ದಾರೆ. ಏನೇ ಇರಲಿ, ಏಷ್ಯಾನೆಟ್ ನ್ಯೂಸ್ ತನ್ನ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ವರದಿ ಮಾಡುವುದನ್ನು ಮುಂದುವರೆಸಿದೆ. ನೇರ, ದಿಟ್ಟ, ನಿರಂತರ ಎಂದು ತಿಳಿಸಿದೆ. ಅಲ್ಲದೇ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಗಂಭೀರ ಭ್ರಷ್ಟ ಆರೋಪಗಳನ್ನು ಎದುರಿಸುತ್ತಿರುವ ಪಿಣರಾಯಿ ವಿಜಯನ್ ಅವರು ತಮ್ಮ ಎಸ್‌ಎಫ್‌ಐ ಹುಡ್ಲಮ್ಸ್ (hoodlums) ಮತ್ತು ಪೊಲೀಸರನ್ನು ಬಳಸಿಕೊಂಡು ಮಾಧ್ಯಮಗಳ ಗಮನವನ್ನು ಬೇರೆಡೆಗೆ ಸೆಳೆಯಬಹುದು ಎಂದು ಭಾವಿಸುತ್ತಾರೆ. ಜೋಕರ್ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ಕೇರಳದಲ್ಲಿ ವಿದ್ಯಾರ್ಥಿನಿಯರ ಡ್ರಗ್ಸ್ ಸೇವನೆ, ಲೈಂಗಿಕ ದೌರ್ಜನ್ಯ ಕುರಿತು ಸುದ್ದಿಯನ್ನು ಪ್ರಸಾರ ಮಾಡುತ್ತಿದೆ. ಕಳೆದ ವರ್ಷ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಕುರಿತ ತನ್ನ ಕಾರ್ಯಕ್ರಮದ ಭಾಗವಾಗಿ ಇತ್ತೀಚೆಗೆ ಕೂಡ ಉತ್ತರ ಕೇರಳದ ಶಾಲೆಯೊಂದರಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಲೈಂಗಿಕ ದೌರ್ಜನ್ಯದ ಬಗ್ಗೆ ಸುದ್ದಿ ವಾಹಿನಿಯು ''ಸುಳ್ಳು ಸುದ್ದಿ'' ಪ್ರಸಾರ ಮಾಡಿದೆ. ಈ ಚಾನಲ್ ನಡೆಸುತ್ತಿರುವ ''ಸುಳ್ಳು ಸುದ್ದಿ''ಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವುದಾಗಿ ಎಸ್‌ಎಫ್‌ಐನ ಎರ್ನಾಕುಲಂ ಜಿಲ್ಲಾ ಸಮಿತಿ ತಿಳಿಸಿತ್ತು.
ಮತ್ತೊಂದೆಡೆ, ಎಸ್‌ಎಫ್‌ಐನ ಕ್ರಮದ ಬಗ್ಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಕೂಡ ಟೀಕಿಸಿತ್ತು. ಅಲ್ಲದೇ, ಚಾನಲ್ಗೆ ನುಗ್ಗಿರುವ ಆರೋಪ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಕೇರಳ ಸರ್ಕಾರಕ್ಕೆ ಒತ್ತಾಯಿಸಿತು. ಇಷ್ಟೇ ಅಲ್ಲ, ಮಾಧ್ಯಮ ಕಚೇರಿಗಳಿಗೆ ನುಗ್ಗುವುದು ಕಾನೂನು ಬಾಹಿರವಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಪರಿಗಣಿಸಬೇಕೆಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಭಾರತೀಯ ಮಹಿಳಾ ಪ್ರೆಸ್ ಕಾರ್ಪ್ಸ್, ದೆಹಲಿ ಪತ್ರಕರ್ತರ ಒಕ್ಕೂಟ ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.
ಇದನ್ನೂ ಓದಿ:ಸುಳ್ಳು ಸುದ್ದಿ ಹಬ್ಬಿಸಿದವರು ದೇಶ ವಿರೋಧಿಗಳು ಎಂದ ಸ್ಟಾಲಿನ್: ಪತ್ರಿಕೆ ಸಂಪಾದಕ ಸೇರಿ ಮೂವರ ವಿರುದ್ಧ ಕೇಸ್