ಕಣ್ಣೂರು (ಕೇರಳ) : ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಭಾನುವಾರ ಸಂಜೆ ಕಣ್ಣೂರು ಜಿಲ್ಲೆಯ ಕಕ್ಕಯಂಗಡದಲ್ಲಿರುವ ಮುಝಕುನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಹೆಚ್ಚಿ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟ ಸಂಭವಿಸಿದ ಮನೆ ಬಿಜೆಪಿ ಕಾರ್ಯಕರ್ತ ಸಂತೋಷ್ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಸ್ಫೋಟದಿಂದ ಸಂತೋಷ್ ಮತ್ತು ಆವರ ಪತ್ನಿ ಲಸಿತಾ ಗಾಯಗೊಂಡಿದ್ದಾರೆ. ಮನೆಯ ಅಡುಗೆ ಕೋಣೆ ಹಿಂಭಾಗದಲ್ಲಿ ಸ್ಫೋಟ ಸಂಭವಿಸಿದೆ. ಮನೆಯಲ್ಲಿ ಬಾಂಬ್ ತಯಾರಿಸುವಾಗ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಫೋಟದ ವೇಳೆ ಸಂತೋಷ್ ಅವರ ತಾಯಿ ಮತ್ತು ಮಕ್ಕಳು ಮನೆಯ ಇನ್ನೊಂದು ಕೋಣೆಯಲ್ಲಿದ್ದ ಕಾರಣ ಭಾರೀ ಅನಾಹುತ ತಪ್ಪಿದೆ.
ಸ್ಫೋಟದ ಸುದ್ದಿ ತಿಳಿದು ಮನೆಯ ಸುತ್ತಮುತ್ತ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರು ಜಮಾಯಿಸಿದ್ದಾರೆ. ಇದರಿಂದ ಸ್ಥಳದಲ್ಲಿ ತ್ವೇಷದ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶಾಸಕ ಸನ್ನಿ ಜೋಸೆಫ್ ಮತ್ತು ಡಿಸಿಸಿ ಅಧ್ಯಕ್ಷ ಮಾರ್ಟಿನ್ ಜಾರ್ಜ್ ಸ್ಫೋಟ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದರು. ನಿನ್ನೆ (12.03.23) ರಾತ್ರಿ ಈ ಘಟನೆ ನಡೆದಿದೆ. ಸ್ಫೋಟ ಸಂಭವಿಸಿದ ಮನೆಯ ದೃಶ್ಯಾವಳಿಗಳನ್ನು ತಡರಾತ್ರಿ ಬಿಡುಗಡೆ ಮಾಡಲಾಗಿದೆ.
ಟ್ರಕ್‌ಗೆ ಬೆಂಕಿ- ಇಬ್ಬರು ಸಜೀವ ದಹನ:ಮಧ್ಯಪ್ರದೇಶದ ಧಾರ್ ಜಿಲ್ಲೆಯ ಹೆದ್ದಾರಿಯೊಂದರಲ್ಲಿ ಶನಿವಾರ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್ ಮತ್ತೆರಡು ಟ್ರಕ್ಗಳಿಗೆ ಡಿಕ್ಕಿ ಹೊಡೆದ ನಂತರ ಅದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಇಂದೋರ್-ಮುಂಬೈ ಹೆದ್ದಾರಿಯಲ್ಲಿರುವ ಗಣಪತಿ ಘಾಟ್‌ನಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ದೇವೇಂದ್ರ ಪಾಟಿದಾರ್ ತಿಳಿಸಿದ್ದಾರೆ.
ಮಾರ್ಬಲ್ ಸಾಗಿಸುವ ಉದ್ದನೆಯ ಟ್ರಕ್‌ನ ಬ್ರೇಕ್ ವಿಫಲವಾಗಿದೆ. ಇದರಿಂದಾಗಿ ವಾಹನವು ಡಿವೈಡರ್ ದಾಟಿ ಹೆದ್ದಾರಿಯ ಮತ್ತೊಂದು ಭಾಗಕ್ಕೆ ಹೋಗಿದೆ. ಅಲ್ಲಿ ಎದುರಿಗೆ ಬರುತ್ತಿದ್ದ ಎರಡು ಲಾರಿಗಳು ಇದಕ್ಕೆ ಡಿಕ್ಕಿಯಾಗಿವೆ. ಅಪಘಾತದ ನಂತರ ಎಲ್ಲಾ ಮೂರು ಟ್ರಕ್‌ಗಳು ಬೆಂಕಿಗೆ ಆಹುತಿಯಾಗಿವೆ. ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಮಾರ್ಬಲ್ ತುಂಬಿದ್ದ ಟ್ರಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅದರ ಚಾಲಕ ಮನೋಜ್ ರಾವತ್ (25) ಮತ್ತು ಸಹಾಯಕ ವಿನೋದ್ (23) ಸುಟ್ಟು ಕರಕಲಾಗಿದ್ದು, ಅವರ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಡಿಸಲಿಗೆ ಬೆಂಕಿ- ಐವರು ಸಜೀವ ದಹನ: ಕಾನ್ಪುರ ದೇಹಾತ್‌ನಲ್ಲಿ ಭಾನುವಾರ ಗುಡಿಸಲೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಐವರು ಸಜೀವ ದಹನಗೊಂಡಿದ್ದಾರೆ. ರೂರಾ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಮೌ ಬಂಜರಡೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸತೀಶ್ ಕುಮಾರ್, ಅವರ ಪತ್ನಿ ಕಾಜಲ್ ಮತ್ತು ಅವರ ಮೂವರು ಮಕ್ಕಳು ಮಲಗಿದ್ದಾಗ ಗುಡಿಸಲಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ : ಸ್ನೇಹಿತೆಯ ಮನೆಯಲ್ಲೇ ಬಾಲಕಿಗೆ ಚಿತ್ರಹಿಂಸೆ.. ಚಿಕಿತ್ಸೆ ಫಲಕಾರಿಯಾಗದೆ ಸಾವು