ತಿರುವನಂತಪುರಂ: ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನ ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ದೆಹಲಿಯಿಂದ ಕರೆ ತರಲು ಕೇರಳ ಸರ್ಕಾರ 3 ಚಾರ್ಟರ್ಡ್ ವಿಮಾನಗಳ ವ್ಯವಸ್ಥೆ ಮಾಡಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಬೆಳಗ್ಗೆ 9.30ಕ್ಕೆ, ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 6.30ಕ್ಕೆ ದೆಹಲಿಯಿಂದ ಹೊರಡಲಿರುವ ಚಾರ್ಟರ್ಡ್ ವಿಮಾನಗಳು ಕೊಚ್ಚಿಗೆ ಬರಲಿವೆ. ಬಳಿಕ ಅಲ್ಲಿಂದ ತಿರುವನಂತಪುರಂ ಹಾಗೂ ಕಾಸರಗೋಡಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
ಉಕ್ರೇನ್‌ನಿಂದ ಹಿಂದಿರುಗಿದವರಿಗೆ ಸಹಾಯ ಮಾಡಲು ಮಹಿಳಾ ಅಧಿಕಾರಿಗಳು ಸೇರಿದಂತೆ ಅನಿವಾಸಿ ಕೇರಳೀಯರ ವ್ಯವಹಾರಗಳ (ನಾರ್ಕಾ) ತಂಡಗಳನ್ನು ರಾಜ್ಯದ ಎಲ್ಲಾ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ. 'ಆಪರೇಷನ್ ಗಂಗಾ' ಅಡಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಿಶೇಷ ವಿಮಾನಗಳ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು.