ತಿರುವನಂತಪುರಂ: 2017 ರಲ್ಲಿ ಸಂಚಲನ ಮೂಡಿಸಿದ್ದ ಟಾಪ್ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ಇನ್ನೂ ತನಿಖೆ ನಡೆಯುತ್ತಿದೆ. ಈ ಪ್ರಕರಣದ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಮಲಯಾಳಂನ ಟಾಪ್ ನಟ ದಿಲೀಪ್, ಅವರ ಸಹೋದರ ಅನೂಪ್, ಅವರ ಅಳಿಯ ಸೂರಜ್ ಸೇರಿದಂತೆ ಕೆಲ ಕುಟುಂಬ ಸದಸ್ಯರ ವಿರುದ್ಧ ಕೇರಳ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.
2017 ರಲ್ಲಿ ನಟಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಟ ಮತ್ತು ಮಲಯಾಳಂ ಚಲನಚಿತ್ರ ನಿರ್ದೇಶಕ ಬಾಲಚಂದ್ರ ಕುಮಾರ್ ಕೆಲ ದಾಖಲೆಗಳನ್ನು ಬಹಿರಂಗಪಡಿಸಿದ ನಂತರ ಈ ಪ್ರಕರಣವನ್ನು ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ದಿಲೀಪ್ ಜತೆ ಜಗಳವಾಡಿದ್ದ ಬಾಲಚಂದ್ರ ಕುಮಾರ್, ಲೈಂಗಿಕ ದೌರ್ಜನ್ಯದ ಕೆಲವು ತುಣುಕುಗಳು ದಿಲೀಪ್ ಬಳಿ ಇವೆ ಎಂದು ಬಹಿರಂಗಪಡಿಸಿದ್ದರು.
ಜೀವಕ್ಕೆ ಅಪಾಯವಿರುವ ಬೆನ್ನೆಲ್ಲೇ ಭಾನುವಾರದಂದು ತನಿಖಾಧಿಕಾರಿಯಾಗಿದ್ದ ಕೇರಳ ಪೊಲೀಸ್‌ನ ಉಪ ಎಸ್‌ಪಿ ಬಿಜು ಪೌಲೋಸ್ ಈ ಸಂಬಂಧ ದೂರು ನೀಡಿದ್ದಾರೆ. ಆಲುವಾ ಗ್ರಾಮಾಂತರ ಜಿಲ್ಲಾ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಎ.ವಿ ಜಾರ್ಜ್ ಮನೆಯಲ್ಲಿ ದಿಲೀಪ್ ಯೂಟ್ಯೂಬ್ ವಿಡಿಯೋ ವೀಕ್ಷಿಸುತ್ತಿರುವಾಗ ನನ್ನನ್ನು ಬಂಧಿಸಲು ಕಾರಣರಾದ ಅಧಿಕಾರಿ ಹಾಗೂ ಇತರ ನಾಲ್ವರು ಅಧಿಕಾರಿಗಳನ್ನು ಕಿತ್ತು ಹಾಕಬೇಕೆಂದು ಹೇಳಿದ್ದರು ಅಂತಾ ಬಾಲಚಂದ್ರ ಬಹಿರಂಗಪಡಿಸಿದ್ದಾರೆ.