ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಕಾಶ್ಮೀರಿ ಪಂಡಿತರೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪುರನ್ ಕೃಷ್ಣನ್ ಭಟ್ ಎಂಬುವರೇ ಕೊಲೆಯಾದ ಕಾಶ್ಮೀರಿ ಪಂಡಿತ ಎಂದು ಗುರುತಿಸಲಾಗಿದೆ.
ಶೋಪಿಯಾನ್ ಜಿಲ್ಲೆಯ ಚೌದ್ರಿಗುಂಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉಗ್ರರ ದಾಳಿಗೆ ಒಳಗಾದ ಪುರನ್ ಕೃಷ್ಣನ್ ಭಟ್ ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.
ದಾಳಿಯ ವಿಷಯ ತಿಳಿದ ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ದಾಳಿಕೋರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೇ ಪ್ರದೇಶದಲ್ಲಿ ಪಂಡಿತರ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಕಳೆದ ತಿಂಗಳು ಇಂತಹದ್ದೇ ದಾಳಿಗಳಲ್ಲಿ ಒಬ್ಬರು ಸಾವನ್ನಪ್ಪಿದ್ದರು.
ಓರ್ವ ಕಾಶ್ಮೀರಿ ಪಂಡಿತಗೆ ಗುಂಡಿಕ್ಕಿ ಕೊಲೆ ಮಾಡಿದ ಉಗ್ರರು ಸ್ಥಳೀಯರ ಪ್ರತಿಭಟನೆ: ಕಾಶ್ಮೀರಿ ಪಂಡಿತ ಪುರನ್ ಕೃಷ್ಣನ್ ಭಟ್ ಹತ್ಯೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಕಾಶ್ಮೀರ ಕಣಿವೆ ಸೇರಿದಂತೆ ಜಮ್ಮುವಿನ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಕಾಶ್ಮೀರದಿಂದ ಪಂಡಿತರನ್ನು ಜಮ್ಮುವಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಕಾಶ್ಮೀರಿ ಪಂಡಿತ್ ಕೊಲೆಯನ್ನು ಖಂಡಿಸಿದ್ದಾರೆ. ಪುರನ್ ಕೃಷ್ಣನ್ ಭಟ್ ಮೇಲೆ ಉಗ್ರರು ನಡೆಸಿದ ದಾಳಿಯು ಅತ್ಯಂತ ಕ್ರೂರವಾದ ಕೃತ್ಯ ಎಂದು ಟೀಕಿಸಿದ್ದಾರೆ. ಅಲ್ಲದೇ, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮನೋಜ್ ಸಿನ್ಹಾ, ದುಷ್ಕರ್ಮಿಗಳು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಜನತೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಜಮ್ಮುಕಾಶ್ಮೀರದಲ್ಲಿ 16 ಕೆಜಿ ಐಇಡಿ ಪತ್ತೆ: ಬಾಂಬ್ ನಿಷ್ಕ್ರಿಯ ತಂಡದಿಂದ ಸ್ಫೋಟ