ನವದೆಹಲಿ:ಸಂಪೂರ್ಣ ಕಾಶ್ಮೀರವನ್ನು ಗೆಲ್ಲುವ ಮುನ್ನವೇ ಕದನ ವಿರಾಮ ಘೋಷಿಸಿ, ಈ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮಾಡಿದ ಎರಡು ಪ್ರಮಾದಗಳೇ ಜಮ್ಮು ಮತ್ತು ಕಾಶ್ಮೀರದ ಜನರ ಇಂದಿನ ಸಂಕಷ್ಟಕ್ಕೆ ಕಾರಣ. ಕಣಿವೆ ನಾಡಿನಲ್ಲಿ ಇದುವರೆಗೂ ಭಯೋತ್ಪಾದನೆಗೆ 45 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರಿಂದು ಲೋಕಸಭೆಗೆ ಈ ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡಣೆ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆಗಳ ಕುರಿತು ಮಾತನಾಡಿದ ಗೃಹ ಸಚಿವರು, ''ನೆಹರೂ ಅವರ ಪ್ರಮಾದಗಳಿಂದ ಕಾಶ್ಮೀರ ಸಂಕಷ್ಟಕ್ಕೆ ಸಿಲುಕಿತು. ಮೊದಲನೇಯದಾಗಿ, ನಮ್ಮ ಸೇನೆ ಗೆದ್ದು ಪಂಜಾಬ್ ಪ್ರದೇಶ ತಲುಪಿದ ಕೂಡಲೇ ಕದನ ವಿರಾಮ ಘೋಷಿಸಿದ ಪರಿಣಾಮ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಹುಟ್ಟಿಕೊಂಡಿತು. ಇದಾಗಿ ಮೂರು ದಿನಗಳ ನಂತರ ಕದನ ವಿರಾಮ ಘೋಷಣೆಯಾಗಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು'' ಎಂದರು.
''ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಿದ್ದು ಎರಡನೇ ಪ್ರಮಾದ. ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯಬೇಕಾದರೆ, ವಿಶ್ವಸಂಸ್ಥೆಯ ಚಾರ್ಟರ್‌ನ ಆರ್ಟಿಕಲ್ 35ರ ಬದಲಿಗೆ ಆರ್ಟಿಕಲ್ 51ರಡಿ ಕಳುಹಿಸಬೇಕಿತ್ತು" ಎಂದರು. ಇದಾದ ನಂತರದಲ್ಲಿ ಕದನ ವಿರಾಮ ''ತಪ್ಪು'' ಎಂದಿದ್ದ ನೆಹರೂ ಹೇಳಿಕೆಯನ್ನು ಉಲ್ಲೇಖಿಸಿದ ಶಾ, ''ಇದು ನೆಹರೂ ಅವರ ತಪ್ಪಲ್ಲ, ಪ್ರಮಾದ. ಈ ದೇಶದ ತುಂಬಾ ಭೂಮಿ ಕಳೆದುಕೊಳ್ಳಬೇಕಾಯಿತು. ಇದೊಂದು ಐತಿಹಾಸಿಕ ಪ್ರಮಾದ'' ಎಂದು ತಿಳಿಸಿದರು. ನೆಹರೂ ಕುರಿತು ಅಮಿತ್ ಶಾ ಮಾತನಾಡುತ್ತಿದ್ದಂತೆ ಪ್ರತಿಪಕ್ಷಗಳು ಕೋಲಾಹಲ ನಡೆಸಿದವು. ಸಭಾತ್ಯಾಗ ಮಾಡಿದ ಪ್ರತಿಪಕ್ಷಗಳ ಸದಸ್ಯರು, ಕೆಲ ಸಮಯದ ನಂತರ ಕಲಾಪಕ್ಕೆ ಹಿಂತಿರುಗಿದರು.