ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆನಾಡಿನಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿ ತೀವ್ರವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನಡೆದ ಕೆಮಿಸ್ಟ್ ಮತ್ತು ಹಿರಿಯ ಉದ್ಯಮಿ ಮಕನ್ ಲಾಲ್ ಬಿಂದ್ರೂ ಅವರ ಹತ್ಯೆ ಗಂಭೀರ ಚರ್ಚೆ ಹುಟ್ಟುಹಾಕಿದೆ.
ಭಯೋತ್ಪಾದಕರ ದಾಳಿಗಳು ಆಗಾಗ ನಡೆಯುತ್ತಿದ್ದರೂ ಮಕನ್ ಲಾಲ್ ಬಿಂದ್ರೂ ಅವರ ಹತ್ಯೆಯ ನಂತರ ಜಮ್ಮು ಕಾಶ್ಮೀರದಲ್ಲಿ ಟಾರ್ಗೆಟೆಡ್ ಕಿಲ್ಲಿಂಗ್ ಸಂಸ್ಕೃತಿ ಆರಂಭವಾಗಿದೆಯಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
'ಆರ್ಎಸ್ಎಸ್ ವ್ಯಕ್ತಿ, ಸಂತಾಪ ಸೂಚಿಸಬೇಡಿ..'
ಮಕನ್ ಲಾಲ್ ಬಿಂದ್ರೂ ಅವರ ಹತ್ಯೆಯ ಹೊಣೆ ಹೊತ್ತುಕೊಂಡ ಲಷ್ಕರ್-ಎ-ತೋಯ್ಬಾದ ಮತ್ತೊಂದು ಅಂಗಸಂಸ್ಥೆ ಎನ್ನಲಾದ ದ ರೆಸಿಸ್ಟೆನ್ಸ್ ಫ್ರಂಟ್ (TRF) ಕಾಶ್ಮೀರಿ ವಿರೋಧಿ ಚಟುವಟಿಕೆಯ ಕಾರಣದಿಂದ ಮಕಾನ್ಲಾಲ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.
ಇದರ ಜೊತೆಯಲ್ಲಿ ಬಿಂದ್ರೂ, ಆರ್ಎಸ್ಎಸ್ಗಾಗಿ ಕೆಲಸ ಮಾಡುತ್ತಿದ್ದರು. ಆದ್ದರಿಂದಾಗಿ ಅವರನ್ನು ಹತ್ಯೆ ಮಾಡಲಾಗಿದೆ. ಕಾಶ್ಮೀರದ ಯಾರೂ ಕೂಡಾ ಇವರ ಬಗ್ಗೆ ಸಂತಾಪ ಸೂಚಿಸಬೇಡಿ. ಬಿಂದ್ರೂ ಅವರು ಆರೋಗ್ಯ ಕಾರ್ಯಕ್ರಮಗಳ ಹೆಸರಿನಲ್ಲಿ ಕಾಶ್ಮೀರಿಗಳನ್ನು ಅದರಲ್ಲೂ ಯುವಕರನ್ನು ಸೆಳೆಯಲು ಸೆಮಿನಾರ್ ಮತ್ತು ರಹಸ್ಯ ಸಭೆಗಳನ್ನು ಕರೆಯುತ್ತಿದ್ದರು ಎಂದು ದ ರೆಸಿಸ್ಟೆನ್ಸ್ ಫ್ರಂಟ್ ಹೇಳಿಕೆ ನೀಡಿದೆ.
'ನಾನು ಕಣ್ಣೀರು ಹಾಕುವುದಿಲ್ಲ'- ಮಗಳ ದಿಟ್ಟ ನುಡಿ
ಮಕಾನ್ ಲಾಲ್ ಸಾವಿನ ನಂತರ ಅವರ ಪುತ್ರಿ ಡಾ.ಸ್ಮ್ರಿದ್ದಿ ಬಿಂದ್ರೂ, 'ನಾನು ಹೋರಾಡುತ್ತಲೇ ಸಾಯುತ್ತೇನೆ ಎಂದು ನನ್ನ ತಂದೆ ಆಗಾಗ ಹೇಳುತ್ತಿದ್ದರು. ಅವರು ಹೋರಾಡುತ್ತಲೇ ನಿಧನ ಹೊಂದಿದ್ದಕ್ಕಾಗಿ ನನಗೆ ಹೆಮ್ಮೆಯಾಗುತ್ತಿದೆ' ಎಂದಿದ್ದಾರೆ.
'ನನ್ನ ತಂದೆ ಈಗ ನಮ್ಮ ಬಳಿ ಇಲ್ಲ. ಆದರೂ ನಾನು ನಗುತ್ತಿದ್ದೇನೆ. ನಾನೆಂದಿಗೂ ಅಳಲಾರೆ. ಈ ಮೂಲಕ ಹತ್ಯೆಗೆ ಕಾರಣರಾದ ಬಂದೂಕುಧಾರಿಗಳಿಗೆ ಸಂತಾಪ ಸೂಚಿಸುತ್ತೇವೆ' ಎಂದು ಡಾ. ಸ್ಮ್ರಿದ್ದಿ ಬಿಂದ್ರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನನ್ನ ತಂದೆಯನ್ನು ಕೊಂದವರು ಧೈರ್ಯವಿದ್ದರೆ ನನ್ನ ಎದುರಿಗೆ ಬಂದು ನಿಲ್ಲಿ. ನನ್ನ ತಂದೆ ಸಾಯುವುದಿಲ್ಲ. ಅವರ ಸ್ಫೂರ್ತಿ ನಮ್ಮದೊಂದಿಗಿದೆ' ಎಂದು ಅವರು ಹೆಮ್ಮೆಯಿಂದ ಹೇಳಿದರು.
ಉಗ್ರರಿಗೆ ನಾಗರಿಕರೇ ಗುರಿ
ಮಖಾನ್ ಲಾಲ್ ಬಿಂದ್ರೂ ಸಾವನ್ನಪ್ಪಿದ ದಿನದಂದೇ ನಡೆದ ದಾಳಿಯಲ್ಲಿ ಇಬ್ಬರು ನಾಗರಿಕರೂ ಸಾವನ್ನಪ್ಪಿದ್ದರು. ಇತ್ತೀಚಿನ ದಾಳಿಗಳಲ್ಲಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂಬುದು ಅತ್ಯಂತ ಆತಂಕಕಾರಿ ಸಂಗತಿ.
2021ನೇ ವರ್ಷದ ಅಕ್ಟೋಬರ್ 5ರವರೆಗೆ ಸುಮಾರು ಭಯೋತ್ಪಾದಕರ ದಾಳಿಗೆ 20 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರೆ, 22 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 2020ರಲ್ಲಿ 33 ಮಂದಿ, 2019ರಲ್ಲಿ 36 ಮಂದಿ ನಾಗರಿಕರು ಸಾವನ್ನಪ್ಪಿದ್ದು, ಕ್ರಮವಾಗಿ 46, 78 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ದಾಳಿ ಪ್ರಮಾಣ ಹೆಚ್ಚಾಗುತ್ತಿದೆಯಾ ಎಂಬ ಪ್ರಶ್ನೆಗಳು ನಮ್ಮಲ್ಲಿ ಕಾಡುತ್ತಿವೆ. ಪಾಕ್ನಿಂದ ಭಯೋತ್ಪಾದಕರ ಒಳನುಸುಳಿವಿಕೆ ಪ್ರಮಾಣವೂ ಕೂಡಾ ಏರಿಕೆಯಾಗುತ್ತಿವೆ ಎಂದು ಸೇನಾಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಪಾಕ್ನಿಂದ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ತೀರಾ ಕಡಿಮೆ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿರುವುದು ಅತ್ಯಂತ ಕುತೂಹಲಕಾರಿ ವಿಚಾರವೂ ಹೌದು. ಸೇನೆಯನ್ನು ಕದನ ವಿರಾಮ ಉಲ್ಲಂಘನೆಯ ಕೃತ್ಯಗಳಿಗೆ ಬಳಸಿಕೊಳ್ಳದೇ, ಭಯೋತ್ಪಾದಕರನ್ನು ಕಣಿವೆನಾಡಲ್ಲಿ ಅಶಾಂತಿ ಸೃಷ್ಟಿಗಾಗಿ ಬಳಸಿಕೊಳ್ಳಲಾಗುತ್ತಿದೆಯಾ? ಎಂಬ ಅನುಮಾನಗಳು ಮೂಡದೇ ಇರುವುದಿಲ್ಲ.
ಉಗ್ರರ ಅಟ್ಟಹಾಸದ ಮಧ್ಯೆ ಬೆಳೆಯುತ್ತಿದೆ ಕೋಮು ಸಾಮರಸ್ಯ!
ದಕ್ಷಿಣ ಕಾಶ್ಮೀರದ ಟ್ರಾಲ್ನಲ್ಲಿ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ಕಾಶ್ಮೀರಿ ಪಂಡಿತ ಕನಿಯಾ ಲಾಲ್ ಕುಮಾರ್ ಸಾವನ್ನಪ್ಪಿದ್ದು, ಆತನ ಅಂತ್ಯಸಂಸ್ಕಾರದಲ್ಲಿ ಸಾಕಷ್ಟು ಮಂದಿ ಭಾಗವಹಿಸಿ ಕೋಮು ಸಾಮರಸ್ಯ ಮೆರೆದಿದ್ದಾರೆ.
ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಮುಸ್ಲಿಮರು
ಅಂತ್ಯಸಂಸ್ಕಾರದ ವೇಳೆಯಲ್ಲಿ ಮುಸ್ಲಿಂ ಧರ್ಮೀಯರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೇ ಸಿಖ್ಖರೂ ಕೂಡಾ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದು, ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:ಲಖೀಮ್ಪುರ ಹಿಂಸಾಚಾರ: ಮೃತ ರೈತನ ಕುಟುಂಬಸ್ಥರಿಗೆ ಧೈರ್ಯ ತುಂಬಿದ ರಾಹುಲ್, ಪ್ರಿಯಾಂಕಾ