ನವದೆಹಲಿ:ಇಂದು 'ಕಾರ್ಗಿಲ್ ವಿಜಯ್ ದಿವಸ್'. ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಯೋಧರನ್ನು ಇಡೀ ದೇಶವೇ ನಮಿಸಿ, ಗೌರವಿಸುತ್ತಿದೆ. 1999ರಲ್ಲಿ ಲಡಾಖ್‌ನ ಕಾರ್ಗಿಲ್‌ನಲ್ಲಿರುವ ಗಡಿ ನಿಯಂತ್ರಣ ರೇಖೆಯ(ಎಲ್‌ಒಸಿ)ಯಲ್ಲಿದ್ದ ಪಾಕಿಸ್ತಾನಿ ಪಡೆಗಳನ್ನು ಭಾರತೀಯ ಸೇನೆ ಅತ್ಯಂತ ಯಶಸ್ವಿಯಾಗಿ ಹೊರಹಾಕಿತ್ತು. ಈ ಅದ್ವಿತೀಯ ವಿಜಯ ದಿನ ಸ್ಮರಿಸಲು ಪ್ರತಿ ವರ್ಷ ಜು.26 ರಂದು 'ಕಾರ್ಗಿಲ್ ವಿಜಯ್ ದಿವಸ್' ಎಂದು ದೇಶಾದ್ಯಂತ ಆಚರಿಸಲಾಗುತ್ತದೆ.
- 'ಶೌರ್ಯ ಮತ್ತು ನಿರ್ಣಯದ ಸಂಕೇತ': ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರರಿಗೆ ಗೌರವ ಸಲ್ಲಿಸಿದರು. "ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ ಮತ್ತು ನಿರ್ಣಯದ ಸಂಕೇತ. ಭಾರತ ಮಾತೆಯನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಯೋಧರಿಗೆ ನಾನು ನಮಿಸುತ್ತೇನೆ. ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ದೇಶವಾಸಿಗಳೆಲ್ಲರೂ ಸದಾ ಋಣಿಗಳಾಗಿರುತ್ತಾರೆ. ಜೈ ಹಿಂದ್" ಎಂದು ಟ್ವೀಟ್ ಮಾಡಿದ್ದಾರೆ.
- ಹೆಮ್ಮೆ ಮತ್ತು ವೈಭವದ ಸಂಕೇತ: "ಕಾರ್ಗಿಲ್ ವಿಜಯ್ ದಿವಸ್ ಭಾರತೀಯರ ಹೆಮ್ಮೆ ಮತ್ತು ವೈಭವದ ಸಂಕೇತ. ಈ ಸಂದರ್ಭದಲ್ಲಿ, ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯವನ್ನು ಸಾಧಿಸಿದ ದೇಶದ ಎಲ್ಲಾ ವೀರ ಪುತ್ರರಿಗೆ ನನ್ನ ವಂದನೆಗಳು" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
- ಹುತಾತ್ಮ ಯೋಧರಿಗೆ ಗೌರವ ನಮನ: "ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಕಾರ್ಗಿಲ್ ವಿಜಯ ದಿವಸದಂದು ಗೌರವಪೂರ್ಣ ನಮನಗಳು. ಹುತಾತ್ಮ ಯೋಧರ ಅಪ್ರತಿಮ ಶೌರ್ಯ, ಸಾಹಸ, ತ್ಯಾಗ, ಬಲಿದಾನಗಳನ್ನು ಈ ದೇಶ ಸದಾ ಸ್ಮರಿಸಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
-
ಮೂವರು ಸೇವಾ ಮುಖ್ಯಸ್ಥರಿಂದ ಪುಷ್ಪಾರ್ಚನೆ:ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು.