ಮುಂಬೈ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಿನ್ನೆ, ಮುಸ್ಲಿಂ ಸಮಾಜದ ಪ್ರಜ್ಞಾವಂತ ನಾಯಕರು ಉಗ್ರವಾದವನ್ನು ವಿರೋಧಿಸುವಂತೆ ಕರೆ ನೀಡಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟ್ವೀಟ್ ಮೂಲಕ ಮೋಹನ್ ಭಾಗವತ್ಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ನಾಯಕರು ಕೋಮುವಾದ ಪ್ರಚೋದಿಸಬಾರದು..
ಈ ಕುರಿತು ಟ್ವೀಟ್ ಮಾಡಿರುವ ಸಿಬಲ್, ಮುಸ್ಲಿಂ ಸಮುದಾಯದ ಪ್ರಜ್ಞಾವಂತ ನಾಯಕರು ಉಗ್ರವಾದ ವಿರೋಧಿಸಬೇಕು ನಿಜ, ಪ್ರಜ್ಞಾವಂತ ಬಿಜೆಪಿ ನಾಯಕರು ಕೋಮುವಾದ ಪ್ರಚೋದಿಸಬಾರದು ಭಾಗವತರೇ ಎಂದು ತಿರುಗೇಟು ನೀಡಿದ್ದಾರೆ.
ವಿಚಾರ ಸಂಕಿರಣದಲ್ಲಿ ಭಾಗವತ್ ಹೇಳಿದ್ದೇನು?
ಮುಂಬೈನಲ್ಲಿ ಸೋಮವಾರ ನಡೆದ 'ರಾಷ್ಟ್ರ ಪ್ರಥಮ - ರಾಷ್ಟ್ರ ಸರ್ವೋಪರಿ' ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಭಾಗವತ್, ಮುಸ್ಲಿಂ ಸಮಾಜದ ಪ್ರಜ್ಞಾವಂತ ನಾಯಕರು ದೌರ್ಜನ್ಯ, ಸಾಂಪ್ರದಾಯಿಕತೆ ವಿರೋಧಿಸಬೇಕು ಎಂದಿದ್ದರು.
ಭಾರತದಲ್ಲಿ ವಾಸಿಸುತ್ತಿರುವ ಹಿಂದೂಗಳು ಮತ್ತು ಮುಸ್ಲಿಮರ ಪೂರ್ವಜರು ಒಬ್ಬರೇ. ಆದರೆ, ಹಿಂದೂ-ಮುಸ್ಲಿಂ ನಡುವೆ ವೈಷಮ್ಯ ತಂದಿಟ್ಟಿದ್ದು ಬ್ರಿಟಿಷರು. ಈ ದೇಶದಲ್ಲಿ ಮುಸ್ಲಿಮರು ಏನನ್ನೂ ಪಡೆಯುವುದಿಲ್ಲ.
ಅವರ ಬೇಡಿಕೆಗಳನ್ನು ಈಡೇರಿಸಲಾಗುವುದಿಲ್ಲ. ಅಲ್ಲದೇ ಮುಸ್ಲಿಮರು ಹಿಂದೂಗಳೊಂದಿಗೆ ಬದುಕಲು ನಿರ್ಧರಿಸಿದರೆ ಅವರಿಗೆ ಏನೂ ಸಿಗುವುದಿಲ್ಲ. ಹಿಂದೂಗಳು ಮಾತ್ರ ಚುನಾಯಿತರಾಗುತ್ತಾರೆ. ಹೀಗಾಗಿ ನೀವು ಪ್ರತ್ಯೇಕ(ರಾಷ್ಟ್ರ) ಬೇಡಿಕೆ ಇಡುವಂತೆ ಬ್ರಿಟಿಷರು ಮುಸ್ಲಿಮರಿಗೆ ತಾಕೀತು ಮಾಡಿದರು ಎಂದು ಭಾಗವತ್ ಹೇಳಿದ್ದರು.
ಇಸ್ಲಾಂ ಭಾರತದಿಂದ ಕಣ್ಮರೆಯಾಗುತ್ತದೆ ಎಂದು ಬ್ರಿಟಿಷರು ಹೇಳಿದ್ದರು. ಆದರೆ, ಅದು ಸಾಧ್ಯವಾಗಿದೆಯೇ? ಇಲ್ಲ. ಮುಸ್ಲಿಮರು ಎಲ್ಲ ಹುದ್ದೆಗಳನ್ನು ಹೊಂದಬಹುದು ಎಂದಿದ್ದಾರೆ.
ನಮ್ಮ ದೃಷ್ಟಿಕೋನ ಬದಲಾಗಬೇಕಿದೆ ಎಂದ ಭಾಗವತ್
ಮುಸ್ಲಿಮರು ಉಗ್ರಗಾಮಿಗಳು ಎಂದು ಬ್ರಿಟಿಷರು ಹಿಂದೂಗಳಿಗೆ ಹೇಳಿದರು. ಅವರು ಎರಡೂ ಸಮುದಾಯಗಳ ಮಧ್ಯೆ ಕಿಡಿ ಹೊತ್ತಿಸಿ ಪರಸ್ಪರ ಕಿತ್ತಾಡುವಂತೆ ಮಾಡಿದರು. ಆ ಹೋರಾಟ ಮತ್ತು ನಂಬಿಕೆಯ ಕೊರತೆಯಿಂದಾಗಿ ಈಗ ಎರಡು ಸಮುದಾಯಗಳು ಪರಸ್ಪರ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಾವೀಗ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಎಂದಿದ್ದರು.
ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಖಚಿತ: ಸಿಎಂ ಬೊಮ್ಮಾಯಿ
ದೇಶವನ್ನು ಮುನ್ನಡೆಸಲು ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ನಡೆಯಬೇಕು ಎಂದು ಅವರು ಕರೆ ನೀಡಿದ್ದರು. ಉಗ್ರರನ್ನು ಹೆದುರಿಸಲು ನಾವೀಗ ಒಟ್ಟಾಗಬೇಕು. ಎರಡೂ ಸಮುದಾಯಗಳಲ್ಲಿ ಈ ಅರಿವು ಮೂಡಬೇಕೆಂದರೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದ್ದರು.