ಕಾನ್ಪುರ, ಉತ್ತರ ಪ್ರದೇಶ: ಝಿಕಾ ವೈರಸ್ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಹಾವಳಿ ಮುಂದುವರೆಸಿದೆ. ಕಾನ್ಪುರ ಜಿಲ್ಲಾ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಗುರುವಾರ ಹೊಸದಾಗಿ 25 ಮಂದಿಯಲ್ಲಿ ಝಿಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ.
ಈ ಮೂಲಕ ಈವರೆಗೆ ಝಿಕಾ ಸೋಂಕಿಗೆ ಒಳಗಾದವರ ಸಂಖ್ಯೆ 36ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ಇಬ್ಬರು ಗರ್ಭಿಣಿಯರೂ ಇದ್ದಾರೆ ಎಂದು ಕಾನ್ಪುರ ಜಿಲ್ಲಾ ಆರೋಗ್ಯ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬುಧವಾರ 11 ಮಂದಿಯಲ್ಲಿ ಝಿಕಾ ಕಾಣಿಸಿಕೊಂಡಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನ್ಪುರದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ನೇಪಾಲ್ ಸಿಂಗ್ ಆರೋಗ್ಯ ಇಲಾಖೆಯು 400ರಿಂದ 500 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಮನೆ ಮನೆಗೆ ತೆರಳಿ ಆರೋಗ್ಯ ಸಿಬ್ಬಂದಿ ಸ್ಯಾಂಪಲ್ಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.