ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳನ್ನು ಲೋಕಸಭೆ ಬುಧವಾರ ಅಂಗೀಕರಿಸಿತು. ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡಣೆ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆಗಳು ಪಾಸ್ ಆಗಿವೆ.
ಪುನರ್‌ವಿಂಗಡಣೆ ತಿದ್ದುಪಡಿ ಮಸೂದೆಯು ಜಮ್ಮು-ಕಾಶ್ಮೀರ ವಿಧಾನಸಭೆಗೆ ಇಬ್ಬರು ಕಾಶ್ಮೀರಿ ವಲಸಿಗರು ಹಾಗೂ ಒಬ್ಬರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಿರಾಶ್ರಿತರನ್ನು ನಾಮನಿರ್ದೇಶನ ಮಾಡುವ ಅವಕಾಶ ಕಲ್ಪಿಸುತ್ತದೆ. ಮತ್ತೊಂದು, ಮೀಸಲಾತಿ ತಿದ್ದುಪಡಿ ಮಸೂದೆಯು ನೇಮಕಾತಿ ಮತ್ತು ಪ್ರವೇಶದಲ್ಲಿ ಮೀಸಲಾತಿಗೆ ಅರ್ಹರಾಗಿರುವ ಜನರ ವಿಭಾಗದ ನಾಮಕರಣವನ್ನು ಬದಲಾಯಿಸಲು ಅನುಮತಿ ನೀಡುತ್ತದೆ.
17ನೇ ಸಂಸತ್ತಿನ ಕೊನೆಯ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಯನ್ನು ಸರ್ಕಾರ ಮಂಡಿಸಿತ್ತು. ಈ ತಿದ್ದುಪಡಿ ವಿಧೇಯಕಗಳ ಮೇಲೆ ಎರಡು ದಿನಗಳ ಕಾಲ ಒಟ್ಟು ಆರು ಗಂಟೆಗಳ ಸುದೀರ್ಘ ಚರ್ಚೆ ನಡೆಯಿತು. ಇಂದು ಸದನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಮಸೂದೆಗಳ ಮೇಲೆ ಉತ್ತರ ನೀಡಿದ ನಂತರ ಅಂಗೀಕರಿಸಲಾಯಿತು.
70 ವರ್ಷಗಳಿಂದ ಅವಕಾಶ ವಂಚಿತರಿಗೆ ನ್ಯಾಯ, ಧ್ವನಿ-ಅಮಿತ್ ಶಾ:''ಸರ್ಕಾರ ತಂದಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಈ ಎರಡು ಮಸೂದೆಗಳು ಕಳೆದ 70 ವರ್ಷಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದವರಿಗೆ ನ್ಯಾಯ ಒದಗಿಸುತ್ತದೆ ಹಾಗೂ ನಿರಾಶ್ರಿತರಿಗೆ ನೀಡುವ ಮೀಸಲಾತಿಯು ಶಾಸಕಾಂಗದಲ್ಲಿ ಧ್ವನಿ ಎತ್ತಲು ಅವಕಾಶ ನೀಡಲಿದೆ'' ಎಂದು ಅಮಿತ್ ಶಾ ಪ್ರತಿಪಾದಿಸಿದರು.
ಎರಡು ಐತಿಹಾಸಿಕ ಪ್ರಮಾದ ನೆನಪಿಸಿದ ಅಮಿತ್ ಶಾ:ಇದೇ ವೇಳೆ, ಮೊದಲು ಕದನ ವಿರಾಮ ಘೋಷಿಸಿ ನಂತರ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದ ನಿರ್ಧಾರವನ್ನು ಪ್ರಸ್ತಾಪಿಸಿದ ಅವರು, ''ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮಾಡಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರ ಇಂದು ಸಂಕಷ್ಟಕ್ಕೆ ಸಿಲುಕಿದೆ. ನೆಹರು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಪಿಒಕೆ ಈಗ ಭಾರತದ ಭಾಗವಾಗುತ್ತಿತ್ತು. ಇದು ಐತಿಹಾಸಿಕ ಪ್ರಮಾದ'' ಎಂದು ಒತ್ತಿ ಹೇಳಿದರು.
ಮುಂದುವರೆದು ಮಾತನಾಡಿದ ಅಮಿತ್ ಶಾ, ''ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳನ್ನು ಶೂನ್ಯಕ್ಕಿಳಿಸುವ ಯೋಜನೆ ಕಳೆದ ಮೂರು ವರ್ಷಗಳಿಂದ ಜಾರಿಯಲ್ಲಿದೆ. 2026ರ ವೇಳೆಗೆ ಯಾವುದೇ ಹಿಂಸಾಚಾರ ಇಲ್ಲದಿರುವ ಪ್ರದೇಶವಾಗಿಸುವ ಗುರಿ ಯಶಸ್ವಿಯಾಗಲಿದೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಿಧಾನಸಭೆ ಚುನಾವಣೆಯಲ್ಲಿ ಗೆಲುವು: ಬಿಜೆಪಿಯ 10 ಸದಸ್ಯರಿಂದ ಸಂಸತ್ತಿಗೆ ರಾಜೀನಾಮೆ