ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಸೇನಾ ವಾಹನದ ಮೇಲೆ ದಾಳಿ ನಡೆದ ಘಟನೆಯಲ್ಲಿ ಸಾವನ್ನಪ್ಪಿದ ಮೂವರು ಸ್ಥಳೀಯರಿಗೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಕಾನೂನು ಮತ್ತು ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದೆ. ಆದರೆ, ಸದ್ಯಕ್ಕೆ ಆರ್ಥಿಕ ನೆರವಿನ ಪ್ರಮಾಣ ಎಷ್ಟೆಂಬುದು ಘೋಷಿಸಿಲ್ಲ.
ಪೂಂಚ್ ಜಿಲ್ಲೆಯಲ್ಲಿ ಗುರುವಾರದಂದು ಉಗ್ರರು ಸೇನಾ ವಾಹನದ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ಐವರು ಯೋಧರು ಹುತಾತ್ಮರಾದರೆ, ಇಬ್ಬರು ಗಾಯಗೊಂಡಿದ್ದರು. ಇದಾದ ಬಳಿಕ ಘಟನಾ ಸ್ಥಳದಲ್ಲಿ ಮೂವರು ನಿವಾಸಿಗಳ ಶವಗಳು ಪತ್ತೆಯಾಗಿದ್ದವು. ದಾಳಿಯ ವೇಳೆ ಸಿಲುಕಿ ಇವರು ಮೃತಪಟ್ಟಿದ್ದು ಗೊತ್ತಾಗಿತ್ತು.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಲ್ಲಿನ ಆಡಳಿತ, ಪೂಂಚ್ ಜಿಲ್ಲೆಯ ಬಫ್ಲಿಯಾಜ್‌ನಲ್ಲಿ ನಿನ್ನೆ ಮೂವರು ನಾಗರಿಕರ ಸಾವು ವರದಿಯಾಗಿದೆ. ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಕಾನೂನಾತ್ಮಕ ಪರಿಹಾರ ನೀಡಲಾಗುವುದು. ಸೂಕ್ತ ಪ್ರಾಧಿಕಾರದಿಂದ ಹತ್ಯೆಗೀಡಾದವರಿಗೆ ನ್ಯಾಯ ಕೊಡಿಸಲಾಗುವುದು ಎಂದು ತಿಳಿಸಿದೆ.
ಸರ್ಕಾರವು ಮರಣ ಹೊಂದಿದ ಪ್ರತಿಯೊಬ್ಬ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದೆ. ಅವರ ಸಂಬಂಧಿಕರಿಗೆ ಸಹಾನುಭೂತಿಯಡಿ ಕೆಲಸ ಕೂಡ ನೀಡಲಾಗುವುದು ಎಂದು ಅದು ಹೇಳಿದೆ. ಆದರೆ, ಹತ್ಯೆಯಾದ ನಾಗರಿಕರಿಗೆ ಪರಿಹಾರದ ಮೊತ್ತ ಎಷ್ಟು ಎಂಬುದರ ಬಗ್ಗೆ ಆಡಳಿತ ಇನ್ನೂ ಘೋಷಿಸಿಲ್ಲ.
ಘಟನೆಯ ವಿವರ:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಗುರುವಾರ ದಾಳಿ ಮಾಡಿದ್ದರು. ಸುರನ್‌ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೆ, ಇಬ್ಬರು ಗಾಯಗೊಂಡಿದ್ದರು.
ಇದೇ ವೇಳೆ, ಮೂವರು ನಾಗರಿಕರ ಶವಗಳು ಗುರುವಾರ ಪತ್ತೆಯಾಗಿದ್ದವು. ಬುಫ್ಲಿಯಾಜ್‌ನ ಟೋಪಾ ಪೀರ್ ಗ್ರಾಮದ ಎಲ್ಲಾ ನಿವಾಸಿಗಳಾದ ಸಫೀರ್ ಹುಸೇನ್ (43), ಮೊಹಮ್ಮದ್ ಶೋಕೆಟ್ (27) ಮತ್ತು ಶಬೀರ್ ಅಹ್ಮದ್ (32) ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದು, ಪೂಂಚ್ ಡೆಪ್ಯುಟಿ ಕಮಿಷನರ್ ಚೌಧರಿ ಮೊಹಮ್ಮದ್ ಯಾಸಿನ್ ಮತ್ತು ಹಿರಿಯ ಪೊಲೀಸ್ ಅಧೀಕ್ಷಕ ವಿನಯ್ ಕುಮಾರ್ ಅವರು ಬುಫ್ಲಿಯಾಜ್ ಪ್ರದೇಶಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು.
ತನಿಖೆಯಲ್ಲಿ ನಾಗರಿಕರು ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟಿದ್ದಾಗಿ ತಿಳಿದುಬಂದಿತ್ತು. ಕುಟುಂಬಸ್ಥರಿಗೆ ನ್ಯಾಯ ಒದಗಿಸಲು ಅಲ್ಲಿನ ಆಡಳಿತ, ಕಾನೂನು ಮತ್ತು ಆರ್ಥಿಕ ಪರಿಹಾರ ಘೋಷಿಸಿದೆ.
ಇಂದೂ ಮುಂದುವರಿದ ಕಾರ್ಯಾಚರಣೆ:ಈ ನಡುವೆ ಸೇನೆ ಇಂದೂ ಕೂಡಾ ರಜೌರಿ ಸೆಕ್ಟರ್‌ನ ಡೇರಾ ಕಿ ಗಲಿ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಹುಡುಕಾಟದಲ್ಲಿ ತೊಡಗಿಸಿಕೊಂಡಿದೆ. ಅಡಗಿಕೊಂಡಿರುವ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಪೂಂಚ್ ಜಿಲ್ಲೆಯ ಬಫ್ಲಿಯಾಜ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಭಯೋತ್ಪಾದಕ ದಾಳಿ ನಡೆದ ಸ್ಥಳದಲ್ಲೇ ಮೂವರ ಶವಗಳು ಪತ್ತೆ