ಜಾರ್ಖಂಡ್: ಜಾರ್ಖಂಡ್ನ ಡುಮ್ಕಾ ಎಂಬಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಯುವಕನೊಬ್ಬ ಪ್ರೀತಿ ತಿರಸ್ಕರಿಸಿದ ನೆಪದಲ್ಲಿ ಮನೆಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಶಾರುಖ್ ಎಂದು ಗುರುತಿಸಲಾಗಿದೆ. ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದಿದೆ. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಸಂತ್ರಸ್ತೆ ಮತ್ತು ಆರೋಪಿ ಬೇರೆ ಬೇರೆ ಧರ್ಮದವರಾಗಿದ್ದಾರೆ. ಈ ಪ್ರಕರಣ ಇದೀಗ ರಾಜಕೀಯ ತಿರುವನ್ನೂ ಪಡೆದುಕೊಂಡಿದೆ. ಮಹಿಳೆಯರ ಸುರಕ್ಷತೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಪಕ್ಷ ಬಿಜೆಪಿ ಸಿಎಂ ಹೇಮಂತ್ ಸೊರೇನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಈ ಪ್ರಕರಣವನ್ನು ಲವ್ ಜಿಹಾದ್ ಎಂತಲೂ ತಿಳಿಸಿದೆ.
1. ಕರೆ ಮಾಡಿ ಬಾಲಕಿಯನ್ನು ಪೀಡಿಸುತ್ತಿದ್ದ ಶಾರುಖ್: ಆಗಸ್ಟ್ 23 ರಂದು ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಬಾಲಕಿಯ ಮೃತದೇಹದ ಅಂತ್ಯಸಂಸ್ಕಾರ ಮಾಡಲಾಗಿದೆ. ಬಾಲಕಿ ಸಾವಿಗೂ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದು, ಶಾರುಖ್ ಮತ್ತು ಇನ್ನೊಬ್ಬ ಛೋಟು ಎಂಬುವವನ ಹೆಸರು ತಿಳಿಸಿದ್ದಾಳೆ. ಬಂಧಿತನಾಗಿರುವ ಆರೋಪಿ ಛೋಟು ಖಾನ್ ಅಲಿಯಾಸ್ ನಯೀಮ್ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಬಾಲಕಿ ನೀಡಿದ ಹೇಳಿಕೆ ಪ್ರಕಾರ, ಆರೋಪಿಯು 10 ದಿನಗಳ ಹಿಂದೆ ಆಕೆಯ ಮೊಬೈಲ್‌ಗೆ ಕರೆ ಮಾಡಿ, ಆತನ ಸ್ನೇಹಿತೆಯಾಗುವಂತೆ ಪೀಡಿಸುತ್ತಿದ್ದನಂತೆ.
2. ನೋವಿನ ಮಡುವಿನಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ ಬಾಲಕಿ:"ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ನನಗೆ ಮತ್ತೆ ಕರೆ ಮಾಡಿ, ನಾನು ಮಾತನಾಡದಿದ್ದರೆ ನನ್ನನ್ನು ಕೊಲ್ಲುತ್ತೇನೆ ಎಂದು ಶಾರುಕ್ ಹೇಳಿದ್ದಾನೆ. ಬೆದರಿಕೆಯ ಬಗ್ಗೆ ನಾನು ನನ್ನ ತಂದೆಗೆ ತಿಳಿಸಿದ್ದೆ. ನಂತರ ನನ್ನ ತಂದೆ ಆತನ ಕುಟುಂಬದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಹಾಗಾಗಿ ಊಟ ಮುಗಿಸಿ ನಾವು ಮಲಗಿದೆವು. ನಾನು ಇನ್ನೊಂದು ಕೋಣೆಯಲ್ಲಿ ಮಲಗಿದ್ದೆ, ಮಂಗಳವಾರ ಬೆಳಗ್ಗೆ ನನಗೆ ಸುಡುವ ವಾಸನೆಯ ಅನುಭವವಾಯಿತು. ನಾನು ಕಣ್ಣು ತೆರೆದಾಗ ಅವರು ಓಡಿಹೋಗುವುದನ್ನು ಕಂಡು, ಕಿರುಚಲು ಪ್ರಾರಂಭಿಸಿದೆ. ನೋವಿನಿಂದ ನನ್ನ ತಂದೆಯ ಕೋಣೆಗೆ ಹೋದೆ. ಅವರು ಬೆಂಕಿಯನ್ನು ನಂದಿಸಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು" ಎಂದು ಬಾಲಕಿ ನೋವಿನ ಮಡುವಿನಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ್ದಳು.