ರಾಂಚಿ (ಜಾರ್ಖಂಡ್):ಆಹಾರ ವಿತರಣೆ ಅಥವಾ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವವರು ಅಥವಾ ಇದೇ ರೀತಿಯ ಇತರ ಕೆಲಸಗಳನ್ನು ಮಾಡುವವರಿಗೆ ಕನಿಷ್ಠ ವೇತನ ಕಾನೂನು ರೂಪಿಸಲು ಜಾರ್ಖಂಡ್ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ರಾಜ್ಯ ಕಾರ್ಮಿಕ ಇಲಾಖೆ ಸಮಿತಿಯೊಂದನ್ನು ರಚಿಸಿದೆ. ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್, ರ‍್ಯಾಪಿಡೊದಂತಹ ಕಂಪನಿಗಳಿಗೆ ಗುತ್ತಿಗೆ ಅಥವಾ ಕಮಿಷನ್ ಮೇಲೆ ಕೆಲಸ ಮಾಡುವ ಜನರನ್ನು ಕನಿಷ್ಠ ವೇತನದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಂಡ ಮೊದಲ ರಾಜ್ಯವಾಗಲಿದೆ ಜಾರ್ಖಂಡ್. ದೇಶದ ಬೇರೆ ಯಾವುದೇ ರಾಜ್ಯ ಸರ್ಕಾರವು ಇಲ್ಲಿಯವರೆಗೆ ಇಂತಹ ಉಪಕ್ರಮವನ್ನು ಕೈಗೊಂಡಿಲ್ಲ.
ಕಾರ್ಮಿಕ ಆಯುಕ್ತ ಸಂಜೀವ್ ಕುಮಾರ್ ಬೆಸ್ರಾ, ಕನಿಷ್ಠ ವೇತನ ಮಂಡಳಿ ನಿರ್ದೇಶಕ ರಾಜೇಶ್ ಪ್ರಸಾದ್, ಫೆಡರೇಶನ್ ಆಫ್ ಜಾರ್ಖಂಡ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಕಿಶೋರ್ ಮಂತ್ರಿ, ಜಾರ್ಖಂಡ್ ಇಂಟಕ್ ಅಧ್ಯಕ್ಷ ರಾಕೇಶ್ವರ್ ಪಾಂಡೆ ಮತ್ತು ಸಿಐಟಿಯು, ಬಿಎಂಎಸ್ ಮತ್ತು ಎಐಟಿಯುಸಿ ಕಾರ್ಮಿಕ ಸಂಘಗಳ ಪ್ರತಿನಿಧಿಗಳನ್ನು ರಾಜ್ಯ ಕಾರ್ಮಿಕ ಇಲಾಖೆ ಅಡಿ ಜಾರ್ಖಂಡ್ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ರಚಿಸಿದ ಸಮಿತಿಯಲ್ಲಿ ಸೇರಿಸಲಾಗಿದೆ.
ಈ ಸಮಿತಿಯು ಸ್ವಿಗ್ಗಿ-ಜೊಮಾಟೊ, ಓಲಾ-ಉಬರ್ ಚಾಲಕರು, ಗಿಗ್ ಕಾರ್ಮಿಕರು, ಆನ್ಲೈನ್ ಡೆಲಿವರಿ ಬಾಯ್ಗಳು ಕೆಲಸ ಮಾಡುವ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲಿದೆ. ಈ ಆಧಾರದ ಮೇಲೆ, ಅವರ ಕನಿಷ್ಠ ವೇತನದ ಬಗ್ಗೆ ಶಿಫಾರಸುಗಳನ್ನು ಮಾಡಲಾಗುವುದು. ಜಾರ್ಖಂಡ್ನ ವಿವಿಧ ಜಿಲ್ಲೆಗಳಲ್ಲಿ ಸುಮಾರು 12 ಲಕ್ಷ ಜನ ಇಂಥ ಕೆಲಸದಲ್ಲಿ ತೊಡಗಿದ್ದಾರೆ ಎಂದು ಅಂದಾಜಿಸಲಾಗಿದೆ.