ಮುಂಬೈ:ಕೆನರಾ ಬ್ಯಾಂಕ್ಗೆ 538 ಕೋಟಿ ರೂಪಾಯಿ ವಂಚಿಸಿ, ಜೈಲು ಸೇರಿರುವ ಜೆಟ್ ಏರ್ವೇಸ್ ಸ್ಥಾಪಕ ನರೇಶ್ ಗೋಯಲ್ ಅವರು ಶನಿವಾರ ಕೋರ್ಟ್ನಲ್ಲಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. "ನಾನಿನ್ನು ಬದುಕಿನ ಮೇಲೆ ಯಾವ ಭರವಸೆಯನ್ನೂ ಉಳಿಸಿಕೊಂಡಿಲ್ಲ. ಬದುಕುವುದಕ್ಕಿಂತ ಜೈಲಿನಲ್ಲೇ ಸಾಯುವುದು ಉತ್ತಮ" ಎಂದೆಲ್ಲಾ ಅವರು ನೋವು ತೋಡಿಕೊಂಡರು.
ವಂಚನೆ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸುತ್ತಿದ್ದು, ಗೋಯಲ್ ಅವರನ್ನು ಇಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಅವರು ನ್ಯಾಯಾಧೀಶರ ಮುಂದೆ ಕೈ ಮುಗಿದು ನಿಂತು, "ಪತ್ನಿ ಅನಿತಾಳ ಅವರನ್ನು ತಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಇದ್ದೊಬ್ಬ ಮಗಳೂ ಕೂಡ ಅನಾರೋಗ್ಯಕ್ಕೀಡಾಗಿದ್ದಾಳೆ. ಅವರಿಗೆ ನೆರವು ನೀಡಿ" ಎಂದು ಕೋರಿದ್ದಾರೆ.
75 ವರ್ಷದ ಗೋಯಲ್ ಅವರು ನ್ಯಾಯಾಲಯದ ಮುಂದೆ ಹಾಜರಾದಾಗ ದೇಹ ಬಳಲಿದಂತಿದ್ದು, ನಡುಗುತ್ತಿದ್ದರು. ಮೊಣಕಾಲುಗಳು ಊದಿಕೊಂಡಿದ್ದು, ನೋವು ಹೆಚ್ಚಾಗಿದೆ. ಕಾಲುಗಳನ್ನು ಮಡಚಲು ಸಾಧ್ಯವಾಗುತ್ತಿಲ್ಲ. ಮೂತ್ರ ವಿಸರ್ಜಿಸುವಾಗ ತೀವ್ರ ನೋವು ಉಂಟಾಗುತ್ತಿದೆ. ಹೀಗಾಗಿ ತಾವು ಜೀವನದ ಮೇಲೆ ಭರವಸೆ ಕಳೆದುಕೊಂಡಿದ್ದೇನೆ. ಜೈಲಿನಲ್ಲೇ ನನ್ನನ್ನು ಸಾಯಲು ಬಿಡಿ ಎಂದು ಜೆಟ್ ಏರ್ವೇಸ್ ಸಂಸ್ಥಾಪಕ ನ್ಯಾಯಾಲಯದ ಮುಂದೆ ಕೋರಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೆಲ್ಲಾ ಗಮನಿಸಿದ ಜಡ್ಜ್ ಗೋಯಲ್ಗೆ ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ಹೇಳಿದ್ದಾರೆ.