ಬುಡ್ಗಾಮ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು-ಕಾಶ್ಮೀರ ಪೊಲೀಸರು ಬುಡ್ಗಾಮ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತಾರಿಕ್ ಅಹ್ಮದ್ ಭಟ್ ಎಂಬುವನನ್ನು ಬಂಧಿಸಿದ್ದಾರೆ.
ಬಂಧಿತನಿಂದ ಪಿಸ್ತೂಲ್, ಮದ್ದುಗುಂಡು ಮತ್ತು ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಆರ್.ಎಸ್.ಪುರಾ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ನಿನ್ನೆ ರಾತ್ರಿ ಡ್ರೋನ್ ಚಲನೆ ಗಮನಕ್ಕೆ ಬಂದಿದೆ. ಭದ್ರತಾ ಪಡೆಗಳು ಡ್ರೋನ್ ಮೇಲೆ ಗುಂಡು ಹಾರಿಸಿದ ಬಳಿಕ ಅದು ಹಿಂತಿರುಗಿದೆ ಎಂದು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ತಿಳಿಸಿದೆ.
ನವೆಂಬರ್ 30ರಂದು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕನ ಸಹಚರನನ್ನು ಕುಪ್ವಾರಾದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿ, ಅವರಿಂದ ಒಂದು ಗ್ರೆನೇಡ್ ಮತ್ತು 3.50 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದ ನಾಗ್ರೋಟಾದಲ್ಲಿ ಕಳೆದ ತಿಂಗಳು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಸೈನಿಕರು ಹೊಡೆದುರುಳಿಸಿದ್ದರು. ಅವರಿಂದ 11 ಎಕೆ - 47 ರೈಫಲ್‌ಗಳು, 3 ಪಿಸ್ತೂಲ್, 29 ಗ್ರೆನೇಡ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.