ಹೈದರಾಬಾದ್: ಆರ್‌ಎಸ್‌ಎಸ್ ಹಾಗೂ ತಾಲಿಬಾನ್ ಒಂದೇ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದ ಗೀತರಚನೆಕಾರ ಜಾವೇದ್ ಅಖ್ತರ್ ಕ್ಷಮೆಯಾಚನೆಗೆ ಮಹಾರಾಷ್ಟ್ರದ ಶಾಸಕ ಮತ್ತು ಬಿಜೆಪಿ ವಕ್ತಾರ ರಾಮ್ ಕದಮ್ ಆಗ್ರಹಿಸಿದ್ದಾರೆ.
ಸಂವಾದವೊಂದರಲ್ಲಿ ಅಖ್ತರ್, ತಾಲಿಬಾನಿಗಳು ಇಸ್ಲಾಮಿಕ್ ರಾಜ್ಯವನ್ನು ಬಯಸಿದಂತೆ, ಹಿಂದೂ ರಾಷ್ಟ್ರವನ್ನೂ ಬಯಸುವವರಿದ್ದಾರೆ. ತಾಲಿಬಾನ್ ಹಾಗೂ ಆರ್ಎಸ್ಎಸ್ನವರು ಒಂದೇ ಮನಸ್ಥಿತಿಯವರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ, ತಾಲಿಬಾನಿಗಳು ಅನಾಗರಿಕರು, ಅವರ ಕೆಲಸಗಳು ಖಂಡನೀಯ. ಅಂತೆಯೇ, ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವನ್ನು ಬೆಂಬಲಿಸುವ ಎಲ್ಲರೂ ಒಂದೇ ಎಂದು ಹೇಳಿಕೆ ನೀಡಿದ್ದರು ಎನ್ನಲಾಗ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಮ್ ಕದಮ್, ಜಾವೇದ್ ಅಖ್ತರ್ ಅವರ ಈ ಹೇಳಿಕೆ ಕೇವಲ ನಾಚಿಕೆಗೇಡಿನ ಸಂಗತಿಯಲ್ಲ. ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ನ ಕೋಟ್ಯಂತರ ಕಾರ್ಯಕರ್ತರಿಗೆ ನೋವುಂಟು ಮಾಡಿದ ಹೇಳಿಕೆ. ಅವರ ಮಾತಿನಿಂದಾಗಿ ಕೋಟ್ಯಂತರ ಜನರಿಗೆ ಅವಮಾನವಾಗಿದೆ. ಈ ಟೀಕೆಗಳನ್ನು ಮಾಡುವ ಮೊದಲು, ಅವರು ಅದೇ ಸಿದ್ಧಾಂತ ಹೊಂದಿರುವ ಜನರು ಈಗ ಸರ್ಕಾರವನ್ನು ನಡೆಸುತ್ತಿದ್ದಾರೆ. ರಾಜಧರ್ಮವನ್ನು ಪಾಲಿಸುತ್ತಿದ್ದಾರೆ ಎಂಬ ಅರಿವಿರಬೇಕಿತ್ತು. ನಮ್ಮದು ತಾಲಿಬಾನ್ ಸಿದ್ಧಾಂತವಾಗಿದ್ದರೆ, ಅವರು ಟೀಕೆಗಳನ್ನು ಮಾಡಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಂಘದ ಕಾರ್ಯಕರ್ತರಿಗೆ ಅಖ್ತರ್ ಕೈಮುಗಿದು ಕ್ಷಮೆಯಾಚಿಸುವವರೆಗೂ ಅವರ ಯಾವುದೇ ಚಿತ್ರಗಳನ್ನು ದೇಶದಲ್ಲಿ ಪ್ರಸಾರ ಮಾಡಲು ಬಿಡಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಅಖ್ತರ್ ಕೂಡ, ನಾನು ಭಾರತೀಯ ಮೂಲ ಸಂವೇದನೆ ಮೇಲೆ ನಂಬಿಕೆ ಹೊಂದಿದ್ದೇನೆ. ಈ ದೇಶದಲ್ಲಿರುವ ಬಹುಪಾಲು ಜನರು ಸಭ್ಯರು ಮತ್ತು ಸಹಿಷ್ಣುಗಳು. ಭಾರತ ಎಂದಿಗೂ ತಾಲಿಬಾನಿಗಳ ದೇಶವಾಗಲ್ಲ ಎಂದಿದ್ದಾರೆ.