ಜೈಪುರ(ರಾಜಸ್ಥಾನ):ರಾಜಸ್ಥಾನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ನಡುವೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಕಾರ್ಯಾಚರಣೆಗೆ ಇಳಿದಿದೆ. ಜಲ ಜೀವನ್ ಮಿಷನ್‌ನ ಯೋಜನೆಗೆ ಸಂಬಂಧಿಸಿದ ಪ್ರಕರಣದ ತನಿಖೆಗಾಗಿ 24ಕ್ಕೂ ಹೆಚ್ಚು ಸ್ಥಳಗಳಲ್ಲಿ ತೀವ್ರ ಶೋಧ ನಡೆಸಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಇಡಿ ಅಧಿಕಾರಿಗಳ ತಂಡಗಳು ರಾಜ್ಯದ ಎರಡು ಡಜನ್ಗೂ ಹೆಚ್ಚು ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿವೆ. ಐಎಎಸ್ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಸಂಬಂಧಪಟ್ಟ ಸ್ಥಳದಲ್ಲಿ ಕಡತಗಳ ಶೋಧ ನಡೆಸುತ್ತಿದ್ದಾರೆ.
ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ, ರಾಜಸ್ಥಾನದಲ್ಲಿ ಜಲ ಜೀವನ್ ಮಿಷನ್ ಯೋಜನೆಯಲ್ಲಿ 20,000 ಕೋಟಿ ರೂಪಾಯಿ ಅಕ್ರಮ ನಡೆದಿರುವುದರ ಬಗ್ಗೆ ಗಂಭೀರ ಆರೋಪ ಮಾಡಿದ್ದರು.
ಇಡಿಗೆ ಆದಾಯ ತೆರಿಗೆ ಇಲಾಖೆ ಸಾಥ್:ಜಲ ಜೀವನ್ ಮಿಷನ್ನಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗೆ ಸೆಕ್ರೆಟರಿಯೇಟ್ ಕಚೇರಿಗೆ ತಲುಪಿರುವ ಇಡಿ ತಂಡ ಶುಕ್ರವಾರ ಬೆಳಿಗ್ಗೆಯಿಂದಲೇ ನಿರಂತರ ಕ್ರಮ ಕೈಗೊಳ್ಳುತ್ತಿದೆ. ಇದರೊಂದಿಗೆ ಆದಾಯ ತೆರಿಗೆ ಇಲಾಖೆ ತಂಡವೂ ಸ್ಥಳದಲ್ಲಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್ ಅಗರ್ವಾಲ್ ಮತ್ತು ಸಚಿವ ಮಹೇಶ್ ಜೋಶಿ ಕಚೇರಿಯಲ್ಲಿ ಎರಡೂ ಇಲಾಖೆಗಳ ತಂಡಗಳು ಶೋಧ ನಡೆಸುತ್ತಿವೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಈ ದಾಳಿಯು, ಇನ್ನೂ ಕೂಡ ಮುಂದುವರಿದಿದೆ. ಇಡಿ ತಂಡವು ಐಎಎಸ್ ಸುಬೋಧ್ ಅಗರ್ವಾಲ್ ಮತ್ತು ಸಚಿವ ಮಹೇಶ್ ಜೋಶಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಕೇಂದ್ರ ಭದ್ರತಾ ಪಡೆಯ ಶಸ್ತ್ರಸಜ್ಜಿತ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.