ಅಮರಾವತಿ (ಆಂಧ್ರ ಪ್ರದೇಶ):ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶದ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ತೆಲುಗಿನ ಖ್ಯಾತ ನಟ, ರಾಜಕಾರಣಿ ಪವನ್ ಕಲ್ಯಾಣ್ ಬಾಂಬ್ ಸಿಡಿಸಿದ್ದಾರೆ.
ಗುಂಟೂರು ಜಿಲ್ಲೆಯ ಇಪ್ಪತಂ ಗ್ರಾಮದಲ್ಲಿ ಶುಕ್ರವಾರ ಜನಸೇನಾ ಪಕ್ಷದ ಬೆಂಬಲಿಗರ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ಉಲ್ಲೇಖಿಸಿ ಮತ್ತು ಇದನ್ನು ಖಂಡಿಸಿರುವ ಪವನ್ ಕಲ್ಯಾಣ್, ಈ ಧ್ವಂಸದಿಂದಲೇ ಸರ್ಕಾರ ಪತನವು ಆರಂಭವಾಗಿದ್ದು, ಅದು ಉರುಳುವ ದಿನ ದೂರವಿಲ್ಲ ಎಂದು ಗುಡುಗಿದ್ದಾರೆ.
ಮಾರ್ಚ್ 14ರಂದು ಜನಸೇನಾ ಪಕ್ಷ ಸಂಸ್ಥಾಪನಾ ದಿನದ ನಿಮಿತ್ತ ಸಾರ್ವಜನಿಕ ಸಭೆ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟಿರುವ ಗ್ರಾಮಸ್ಥರನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ಗುರಿಯಾಗಿಸಿಕೊಂಡಿದೆ.
ಅಮರಾವತಿಯಲ್ಲಿ ಜನಸೇನೆಯೊಂದಿಗೆ ಸಹಕರಿಸಬೇಡಿ ಎಂದು ಜನರಿಗೆ ಆಡಳಿತ ಪಕ್ಷದ ನಾಯಕರು ಬೆದರಿಕೆ ಹಾಕುತ್ತಿದ್ದಾರೆ. ಇದರ ಬೆದರಿಕೆ ನಡುವೆಯೂ ಜನಸೇನಾ ಸಾರ್ವಜನಿಕ ಸಭೆಗೆ ಗ್ರಾಮಸ್ಥರು ತಮ್ಮ ಸ್ಥಳ ನೀಡಲು ಮುಂದೆ ಬಂದಿದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.