ಲಖನೌ (ಉತ್ತರ ಪ್ರದೇಶ) :ಉತ್ತರ ಪ್ರದೇಶದ ಗೊಂಡಾದಿಂದ ಬಂಧನಕ್ಕೊಳಗಾದ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಐವರು ಏಜೆಂಟರ್ಗಳ ವಿಚಾರಣೆಯ ನಂತರ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಎಟಿಎಸ್ ಕೆಲ ಮಾಹಿತಿಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಪಾಕಿಸ್ತಾನದಿಂದ ಮಹಿಳಾ ಐಎಸ್‌ಐ ಏಜೆಂಟ್‌ಗಳನ್ನು ಭಾರತಕ್ಕೆ ಕಳುಹಿಸಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ, ಎಟಿಎಸ್ ಅಧಿಕಾರಿಗಳು ಮತ್ತೊಮ್ಮೆ ಸೀಮಾ ಹೈದರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೌದು, ಗೊಂಡಾದಲ್ಲಿ ಬಂಧಿತರಾಗಿರುವ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಐವರು ಏಜೆಂಟರುಗಳನ್ನು ಇತ್ತೀಚೆಗೆ ಉತ್ತರಪ್ರದೇಶದ ಎಟಿಎಸ್ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಶೀಘ್ರದಲ್ಲೇ ಕೆಲವು ಮಹಿಳೆಯರು ಮತ್ತು ಪುರುಷರ ಐಎಸ್‌ಐ ಏಜೆಂಟ್ ತಂಡವನ್ನು ಗಡಿಯಾಚೆಯಿಂದ ಕಳುಹಿಸಲಾಗುತ್ತಿದೆ, ಅವರಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿತ್ತು. ವಿಚಾರಣೆ ವೇಳೆ ಮಹಿಳಾ ಏಜೆಂಟ್ ವಿಷಯ ಬಯಲಿಗೆ ಬಂದ ಕೂಡಲೇ ಸಂಸ್ಥೆ ಅಲರ್ಟ್ ಆಗಿದೆ. ಹೀಗಾಗಿಯೇ, ಪಾಕಿಸ್ತಾನದಿಂದ ಯುಪಿಗೆ ಅಕ್ರಮವಾಗಿ ಬಂದ ಸೀಮಾ ಗುಲಾಂ ಹೈದರ್ ಅವರನ್ನು ಐದು ದಿನಗಳ ಕಾಲ ವಿಚಾರಣೆ ನಡೆಸಿ, ಒಂದು ತಿಂಗಳ ಕಾಲ ತನಿಖೆ ನಡೆಸಿದರೂ ಕ್ಲೀನ್ ಚಿಟ್ ನೀಡಲು ಹಿಂದೇಟು ಹಾಕುತ್ತಿದೆ. ಎಟಿಎಸ್ನ ಅಧಿಕೃತ ಮೂಲಗಳ ಪ್ರಕಾರ, ಸಂಸ್ಥೆಯು ಮಹಿಳಾ ISI ಏಜೆಂಟ್‌ಗಾಗಿ ಹುಡುಕುತ್ತಿದೆ. ಆ ನಂತರವೇ ಸೀಮಾ ಹೈದರ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಯುಪಿ ಎಟಿಎಸ್ ತನಿಖೆ ಮತ್ತು ಸೀಮಾ ಗುಲಾಂ ಹೈದರ್ ನೀಡಿದ ಹೇಳಿಕೆಯ ಪ್ರಕಾರ, ಮಹಿಳೆಯು ಗೌತಮ್ ಬುದ್ಧ ನಗರದ ನಿವಾಸಿ ಸಚಿನ್ ಮೀನಾ ಅವರನ್ನು ಭೇಟಿಯಾಗಲು ನೇಪಾಳದ ಮೂಲಕ ಪಾಕಿಸ್ತಾನದಿಂದ ಯುಪಿ ಪ್ರವೇಶಿಸಿದ್ದರು ಎಂದು ಯುಪಿ ಪೊಲೀಸರು ತಿಳಿಸಿದ್ದರು. ಪೊಲೀಸರ ಈ ಹೇಳಿಕೆಯ ನಂತರ, ಸೀಮಾ ಅಕ್ರಮವಾಗಿ ಭಾರತಕ್ಕೆ ಬಂದಿದ್ದಕ್ಕಾಗಿ ಮಾತ್ರ ತಪ್ಪಿತಸ್ಥೆ ಎಂದು ನಂಬಲಾಗಿತ್ತು. ಇದರ ಹೊರತಾಗಿ ಯಾವುದೇ ಪಿತೂರಿ ಇಲ್ಲ ಎಂದು ಸೀಮಾ ಮತ್ತು ಸಚಿನ್ ಅವರನ್ನು ವಿಚಾರಣೆ ನಡೆಸಿ ಅವರ ಮನೆಗೆ ಕಳುಹಿಸಲಾಗಿತ್ತು. ಆದಾಗ್ಯೂ, ಜುಲೈ 15 ಮತ್ತು 18 ರಂದು ಮೂವರು ಐಎಸ್‌ಐ ಏಜೆಂಟ್‌ಗಳಾದ ರಯೀಸ್, ಸಲ್ಮಾನ್ ಮತ್ತು ಅರ್ಮಾನ್ ಅವರನ್ನು ಬಂಧಿಸಿ ಮಾಹಿತಿ ಪಡೆದ ಯುಪಿ ಎಟಿಎಸ್, ಸೀಮಾ ಹೈದರ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.