ಅಹಮದಾಬಾದ್(ಗುಜರಾತ್): ಅಹಮದಾಬಾದ್‌ನ ಥಾಲ್ತೇಜ್ ಪ್ರದೇಶದಲ್ಲಿ ವಾಸಿಸುತ್ತಿರುವ ಐಪಿಎಸ್ ಅಧಿಕಾರಿ ರಾಜನ್ ಸುಸ್ರಾ ಅವರ ಪತ್ನಿ ಶಾಲುಬೆನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ರಾಜನ್ ಸುಸ್ರಾ ಅವರು ವಲ್ಸಾದ್ ಮೆರಿಟೈಮ್ ಸೆಕ್ಯುರಿಟಿಯಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜನ್ ಸುಸ್ರಾ ಅವರು ತಮ್ಮ ಕುಟುಂಬದೊಂದಿಗೆ ಥಾಲ್ತೇಜ್‌ನಲ್ಲಿರುವ ಶಾಂಗ್ರಿಲಾ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಆದ್ರೆ ಅವರ ಪತ್ನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಘಟನೆ ಹೇಗೆ ನಡೆದಿದೆ ಎಂಬುದು ನಮಗೂ ಗೊತ್ತಿಲ್ಲ. ಸಾಹೇಬರು ನಾಲ್ಕೈದು ದಿನ ಮದುವೆ ಸಮಾರಂಭದಲ್ಲಿದ್ದು, ಗುರುವಾರ ಮಧ್ಯಾಹ್ನ ಮನೆಗೆ ಬಂದಿದ್ದರು. ರಾತ್ರಿ ಸಂಬಂಧಿಕರ ಮದುವೆಯಿಂದ ನಮ್ಮ ಅತ್ತೆ ಹಿಂತಿರುಗಿದಾಗ, ಸಾಹೇಬರು ಮಲಗಿದ್ದರು. ಸಾಮಾನ್ಯವಾಗಿ ಅತ್ತೆ ಪ್ರತಿದಿನ ಬೆಳಗ್ಗೆ ಪೂಜೆಗಾಗಿ ಬೇಗನೆ ಏಳುತ್ತಾರೆ. ಆದರೆ ಇವತ್ತು ಸರ್ ಕೆಳಗಿಳಿದು ಬಾಗಿಲು ತೆರೆದು ನೋಡಿದಾಗ ನಮ್ಮ ಅತ್ತೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ನಂತರ ನಾವು ನೇರವಾಗಿ ಪೊಲೀಸರಿಗೆ ಕರೆ ಮಾಡಿದ್ದೆವು ಎಂದು ಮೃತರ ಸೋದರಳಿಯ ಮೆಹುಲ್ ಜುಂಜಾ ಹೇಳಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಪೊಲೀಸ್ ಕಮಿಷನರ್ ಎಸ್ ಎಂ ಪಟೇಲ್ ಅವರು, ಸೂರತ್ನಲ್ಲಿ ಸುಸ್ರಾ ಅವರ ಸಂಬಂಧಿಕರ ಮದುವೆ ಇತ್ತು. ಈ ಮದುವೆ ಸಮಾರಂಭಕ್ಕೆ ಸುಸ್ರಾ ಮತ್ತು ಅವರ ಪತ್ನಿ ಕಳೆದೆರಡು ದಿನಗಳ ಹಿಂದೆಯೇ ಹಾಜರಾಗಿದ್ದರು. ಸುಸ್ರಾ ಅವರು ಗುರುವಾರ ಮಧ್ಯಾಹ್ನ ಅಹಮದಾಬಾದ್‌ಗೆ ಬಂದಿದ್ದರು. ಆದರೆ ಶಾಲುಬೆನ್ ಅವರು ಸೂರತ್‌ನಿಂದ ಅಂದು ರಾತ್ರಿ ಮರಳಿದ್ದರು ಎಂದು ಹೇಳಿದರು.
ಗುರುವಾರ ತಡರಾತ್ರಿ ಸೂರತ್‌ನಿಂದ ಅಹಮದಾಬಾದ್‌ಗೆ ಮರಳಿದ ನಂತರ ಶಾಲುಬೆನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಈ ಘಟನೆ ಕುರಿತು ಬೋಡಕ್‌ದೇವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋಲಾ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಾಲುಬೆನ್ ಅವರು ಅನ್ಯ ಕಾರಣಗಳಿಗಾಗಿ ತಡರಾತ್ರಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಸಹಾಯಕ ಪೊಲೀಸ್ ಕಮಿಷನರ್ ಎಸ್‌ಎಂ ಪಟೇಲ್ ತಿಳಿಸಿದ್ದಾರೆ.
(ದುಡುಕದಿರಿ:- ಎಲ್ಲದಕ್ಕೂ ಆತ್ಮಹತ್ಯೆಯೇ ಪರಿಹಾರವಲ್ಲ. ನೀವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಗಳನ್ನು ಹೊಂದಿದ್ದರೆ ಅಥವಾ ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದಲ್ಲಿ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದಲ್ಲಿ ನಿಮ್ಮ ಕಷ್ಟ, ನೋವುಗಳನ್ನು ಆಲಿಸಲು ಯಾವಾಗಲೂ ಒಬ್ಬರು ಇಲ್ಲಿ ಲಭ್ಯವಿರುತ್ತಾರೆ. ವಿಳಾಸ- ಸ್ನೇಹ ಫೌಂಡೇಶನ್ - 04424640050 (24x7) ಅಥವಾ iCall, ಟಾಟಾ ಇನ್ಸಿಟ್ಯೂಟ್ನ ಸೋಶಿಯಲ್ ಸೈನ್ಸ್ ಸಹಾಯವಾಣಿ - 9152987821, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10ರ ವರೆಗೆ ಲಭ್ಯವಿರುತ್ತದೆ. ಈ ನಂಬರ್ಗೆ ಕರೆ ಮಾಡಿ ನಿಮ್ಮ ಮನಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.)