ಕರ್ನಾಟಕ

karnataka

ಹೊಸ ಅಶೋಕ ಸ್ತಂಭದ ರೂವಾರಿ ವಾಸ್ತುಶಿಲ್ಪಿ ಲಕ್ಷ್ಮಣ್​ ವ್ಯಾಸರ ಸಂದರ್ಶನ

By

Published : Jul 13, 2022, 5:57 PM IST

ಹೊಸ ರಾಷ್ಟ್ರೀಯ ಲಾಂಛನ ರೂಪಿಸಿದ ವಾಸ್ತುಶಿಲ್ಪಿ ಲಕ್ಷ್ಮಣ್​ ವ್ಯಾಸ್​ ಅವರ ಸಂದರ್ಶನ- ಸೆಂಟ್ರಲ್​ ವಿಲ್ಲಾದಲ್ಲಿ ನೆಲೆಕಾಣುವ ಅಶೋಕ ಸ್ತಂಭದ ಬಗ್ಗೆ ಮಾಹಿತಿ ನೀಡಿದ ವಾಸ್ತುಶಿಲ್ಪಿ.

ಹೊಸ ಅಶೋಕ ಸ್ತಂಭದ ರೂವಾರಿ ವಾಸ್ತುಶಿಲ್ಪಿ ಲಕ್ಷ್ಮಣ್​ ವ್ಯಾಸ್​ರ ಸಂದರ್ಶನ
ಹೊಸ ಅಶೋಕ ಸ್ತಂಭದ ರೂವಾರಿ ವಾಸ್ತುಶಿಲ್ಪಿ ಲಕ್ಷ್ಮಣ್​ ವ್ಯಾಸ್​ರ ಸಂದರ್ಶನ

ಜೈಪುರ (ರಾಜಸ್ಥಾನ):ಸೆಂಟ್ರಲ್​ ವಿಲ್ಲಾ(ಹೊಸ ಸಂಸತ್​ ಭವನ) ಮೇಲೆ ರಾರಾಜಿಸಲಿರುವ ರಾಷ್ಟ್ರೀಯ ಲಾಂಛನದ ಸ್ವರೂಪದ ಬಗ್ಗೆ ವಿವಾದ ಉಂಟಾಗಿದೆ. ಅಶೋಕಚಕ್ರ ಒಳಗೊಂಡ ನಾಲ್ಕು ಸಿಂಹಗಳು ಘರ್ಜಿಸುತ್ತಿರುವಂತೆ ಕಾಣುತ್ತಿರುವುದನ್ನು ವಿಪಕ್ಷಗಳು ಟೀಕಿಸಿವೆ. ಭಾರತದ ಶಾಂತಿಯ ಸಂಕೇತವಾದ ರಾಷ್ಟ್ರ ಲಾಂಛನವನ್ನು ಕ್ರೌರ್ಯದ ಮಾದರಿಯಲ್ಲಿ ತೋರಿಸಲಾಗಿದೆ ಎಂದು ತಗಾದೆ ತೆಗೆದಿವೆ.

ಹೊಸ ಅಶೋಕ ಸ್ತಂಭವನ್ನು ರೂಪಿಸಿದ ವಾಸ್ತುಶಿಲ್ಪ ಲಕ್ಷ್ಮಣ್ ವ್ಯಾಸ್​ ಈ ಆರೋಪವನ್ನು ನಿರಾಕರಿಸಿದ್ದಾರೆ. ಮೂಲ ಸ್ವರೂಪದಲ್ಲಿಯೇ ಹೊಸ ರಾಷ್ಟ್ರೀಯ ಲಾಂಛನವನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ದೊಡ್ಡದಾದ ಕಾರಣ ಅದು ಉಗ್ರವಾಗಿ ಕಾಣುತ್ತದೆ ಅಷ್ಟೇ ಎಂದು ಹೇಳಿದ್ದಾರೆ.

ವಾಸ್ತುಶಿಲ್ಪಿ ಲಕ್ಷ್ಮಣ್ ವ್ಯಾಸ್ ಅವರು, ತಮ್ಮ 40 ಸದಸ್ಯರ ತಂಡ ಮತ್ತು ಟಾಟಾ ಕಂಪನಿಯ ಅಧಿಕಾರಿಗಳು ಮತ್ತು ಇತರರು ಲಾಂಛನ ರೂಪುಗೊಳ್ಳಲು ಶ್ರಮಿಸಿದ ಬಗ್ಗೆ 'ಈಟಿವಿ ಭಾರತ್​' ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸಂದರ್ಶನದ ಸಾರ ಇಂತಿದೆ.

ಲಾಂಛನ ಅನಾವರಣ ಬಳಿಕ ಪ್ರಧಾನಿಯವರ ಪ್ರತಿಕ್ರಿಯೆ ಹೇಗಿತ್ತು?:ಹೊಸ ಸಂಸತ್ ಭವನದ ಮೇಲೆ ರೂಪಿಸಲಾದ ಅಶೋಕ್ ಸ್ತಂಭವನ್ನು ಅನಾವರಣಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರ್ಯವನ್ನು ಶ್ಲಾಘಿಸಿದರು. ಬಳಿಕ ಅವರು ಬಳಿ ಬಂದು ನೀವು ಯಾವ ಪ್ರದೇಶದವರು ಎಂದು ವಿಚಾರಿಸಿದರು. ನಾನು ರಾಜಸ್ಥಾನದ ಜೈಪುರ ಎಂದಾಗ, ಒಳ್ಳೆಯ ಕೆಲಸ ಮಾಡಿದ್ದೀರಿ ನಿಮಗೆ ಧನ್ಯವಾದಗಳು ಎಂದರು. ಇದು ನನಗೆ ಅತ್ಯಂತ ಸಂತಸ ತಂದಿದೆ.

5 ತಿಂಗಳ ಯೋಜನೆಯಲ್ಲಿ ಸ್ತಂಭಕ್ಕಾಗಿ ಯಾವ ಮೂಲವನ್ನು ಪರಿಗಣಿಸಿದ್ದೀರಿ?:ಸಾರನಾಥದಲ್ಲಿರುವ ಮೂಲ ಅಶೋಕ ಸ್ಥಂಭವನ್ನೇ ಆಧರಿಸಿ ಹೊಸ ರಾಷ್ಟ್ರೀಯ ಲಾಂಛನವನ್ನು ರೂಪಿಸಲಾಗಿದೆ. ಅದರ ವಿನ್ಯಾಸ ಮತ್ತು ಮಾದರಿಯನ್ನು ಟಾಟಾ ಪ್ರಾಜೆಕ್ಟ್​ ಕಂಪನಿ ನಮಗೆ ನೀಡಿತು. ಪ್ರತಿಮೆಯಲ್ಲಿ ಇಟಾಲಿಯನ್ ಲಾಸ್ಟ್ ವ್ಯಾಕ್ಸ್ ವಿಧಾನವನ್ನು ಬಳಸಿದ್ದೇವೆ. ರಾಷ್ಟ್ರೀಯ ಲಾಂಛನವು ತುಕ್ಕು ರಹಿತವಾಗಿದೆ. ಇದರಲ್ಲಿ 90 ಪ್ರತಿಶತ ತಾಮ್ರ ಮತ್ತು 10 ಪ್ರತಿಶತ ತವರವನ್ನು ಬೆರೆಸಲಾಗಿದೆ.

ಜೈಪುರದಿಂದ ನವದೆಹಲಿಗೆ ಪ್ರತಿಮೆ ಬಂದ ಬಗೆ ಹೇಗೆ?:ಹೊಸ ಅಶೋಕ ಸ್ತಂಭ ಪೂರ್ಣಗೊಳ್ಳಲು 5 ತಿಂಗಳು ತೆಗೆದುಕೊಂಡಿತು. ಹಲವು ಭಾಗಗಳನ್ನಾಗಿ ಮಾಡಿ ಪ್ರತಿಮೆಯನ್ನು ನವದೆಹಲಿಗೆ ಸ್ಥಳಾಂತರಿಸುವುದು ದೊಡ್ಡ ಕೆಲಸವಾಗಿತ್ತು. ಸಂಸತ್ ಕಟ್ಟಡದ ಟೆರೇಸ್‌ನಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು 2 ತಿಂಗಳು ಬೇಕಾಯಿತು. ಲಾಂಛನದ ಎತ್ತರ 21 ಅಡಿ ಇದ್ದು, ಸುಮಾರು ಒಂಬತ್ತು ಟನ್ ತೂಕವಿದೆ. ಮೊದಲು ಲಾಂಛನವು 150 ಭಾಗಗಳನ್ನು ಹೊಂದಿತ್ತು. ಬಳಿಕ ಅದನ್ನು ಗ್ಯಾಸ್ ವೆಲ್ಡಿಂಗ್ ಮತ್ತು ಆರ್ಗನ್ ತಂತ್ರವನ್ನು ಬಳಸಿಕೊಂಡು ಜೋಡಿಸಲಾಯಿತು.

ಯೋಜನೆ ಕಾರ್ಯಗತಗೊಳಿಸುವುದು ಎಷ್ಟು ಸವಾಲಾಗಿತ್ತು?:ದೇಶದ ಹೆಮ್ಮೆಯ ಪ್ರತೀಕವಾದ ರಾಷ್ಟ್ರೀಯ ಲಾಂಛನ ರೂಪಿಸುವ ಮಹತ್ತರ ಕಾರ್ಯವನ್ನು ನನಗೆ ವಹಿಸಲಾಗಿತ್ತು. ಇದೇ ನನ್ನನ್ನು ಪುಳಕಿತಗೊಳಿಸಿತ್ತು. ಅದ್ಭುತ ಮತ್ತು ಮೂಲ ರೂಪಕ್ಕೆ ಧಕ್ಕೆ ಬಾರದಂತೆ ಸ್ತಂಭವನ್ನು ರೂಪಿಸುವುದು ನನಗೂ ಮತ್ತು ತಂಡಕ್ಕೆ ದೊಡ್ಡ ಸವಾಲಾಗಿತ್ತು. ಸತತ ಪರಿಶ್ರಮದಿಂದ ನನ್ನ ತಂಡ ಕನಸನ್ನು ನನಸು ಮಾಡಿದೆ. ಎಲ್ಲ ಒತ್ತಡವನ್ನು ಮೀರಿ ರಾಷ್ಟ್ರೀಯ ಲಾಂಛನವನ್ನು ರೂಪಿಸಲಾಗಿದೆ.

ಓದಿ:ಶುಕ್ರವಾರದಿಂದ ಮುಂದಿನ 75ದಿನ ಉಚಿತ ಕೋವಿಡ್​ ಬೂಸ್ಟರ್ ಡೋಸ್​.. ಕೇಂದ್ರದ ಮಹತ್ವದ ನಿರ್ಧಾರ

ABOUT THE AUTHOR

...view details