ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಸತ್ ಭವನದ ಫಲಕವನ್ನು ಅನಾವರಣಗೊಳಿಸಿದರು. ಇದರ ನಂತರ ಹೊಸ ಸಂಸತ್ ಕಟ್ಟಡದಲ್ಲಿ ಸರ್ವ-ಧರ್ಮ ಪ್ರಾರ್ಥನೆಗಳು ನಡೆದವು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
12 ವಿಭಿನ್ನ ಧರ್ಮಗಳ ಧರ್ಮಗುರುಗಳು ಸರ್ವಧರ್ಮ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಹೋಮ ಹವನಗಳು ನಡೆದ ನಂತರ ಸರ್ವಧರ್ಮ ಪ್ರಾರ್ಥನೆ ಜರುಗಿತು. ಕ್ರಿಶ್ಚಿಯನ್ ಪಾದ್ರಿ, ಇಮಾಮ್, ದೇವಾಲಯದ ಅರ್ಚಕರು, ಸಿಖ್ ಧರ್ಮಗುರುಗಳು, ಬೌದ್ಧ, ಜೈನ ಸನ್ಯಾಸಿಗಳು ಮತ್ತು ಇತರ ಧರ್ಮಗಳ ಪ್ರತಿನಿಧಿಗಳು ಹಾಜರಿದ್ದರು. ಎಲ್ಲ ಧರ್ಮದವರ ಪಾಲ್ಗೊಳ್ಳುವಿಕೆ ಮತ್ತು ಏಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ವಧರ್ಮ ಪ್ರಾರ್ಥನೆಯನ್ನು ಏರ್ಪಡಿಸಲಾಗಿತ್ತು.
ಹನ್ನೆರಡು ಧಾರ್ಮಿಕ ಪ್ರತಿನಿಧಿಗಳು ತಮ್ಮ ತಮ್ಮ ಧಾರ್ಮಿಕ ಗ್ರಂಥಗಳಿಂದ ಪವಿತ್ರ ಸ್ತೋತ್ರಗಳನ್ನು ಪಠಿಸಿದರು. ವೇದ ವಿದ್ವಾಂಸರೊಬ್ಬರು ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡುತ್ತಾ, ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಸಿಖ್ ಬೋಧಕರ ತಂಡವು ಸಾಂಪ್ರದಾಯಿಕ ಸಂಗೀತ ವಾದ್ಯಗಳೊಂದಿಗೆ ಸಾಬಾದ್‌ನ ಸುಮಧುರ ನಿರೂಪಣೆಯೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಜೈನ ಧರ್ಮದ ಎಲ್ಲ ಪಂಗಡಗಳ ಪರವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಜೈನ ಮುನಿಯೊಬ್ಬರು, "ರಾಜದಂಡವನ್ನು ಅದರ ಸೂಕ್ತ ಸ್ಥಳದಲ್ಲಿ ಸ್ಥಾಪಿಸಿದ ಮತ್ತು ಅದಕ್ಕೆ ಅರ್ಹವಾದ ಗೌರವವನ್ನು ನೀಡಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಹೇಳಿದರು.
ಸರ್ವ ಧರ್ಮದ ಸಮಾರಂಭದಲ್ಲಿ ಭಾಗವಹಿಸಿದ ಸಿಖ್ ಗುರು ಬಲ್ಬೀರ್ ಸಿಂಗ್ ಅವರು ಹೊಸ ಸಂಸತ್ತಿನ ಕಟ್ಟಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ರಾಷ್ಟ್ರದ ಪ್ರಗತಿಗೆ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು. ಹೊಸ ಸಂಸತ್ತು ನಿರ್ಮಾಣವಾಗಿರುವುದು ಬಹಳ ಒಳ್ಳೆಯ ಸಂಗತಿ. ನಾನು ರಾಜಕೀಯದಿಂದ ದೂರವಿದ್ದೇನೆ, ಆದರೆ ದೇಶದ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ನಾನು ನಂಬುತ್ತೇನೆ ಎಂದು ಅವರು ತಿಳಿಸಿದರು. ಸಂಸತ್ತಿನಲ್ಲಿ ಸೆಂಗೋಲ್ ತನ್ನ ಸರಿಯಾದ ಸ್ಥಾನವನ್ನು ಪಡೆಯುತ್ತಿದೆ ಎಂದು ತಿರುವಾಡುತುರೈ ಅಧೀನಮ್ನ ಪ್ರಧಾನ ಮಠಾಧೀಶ ಅಂಬಲವಂ ದೇಶಿಕ ಪರಮಾಚಾರ್ಯರು ನುಡಿದರು.
ಸರ್ವ ಧರ್ಮ ಪ್ರಾರ್ಥನೆಯ ಮೊದಲು ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪೂಜೆ ಮತ್ತು ಹವನದಲ್ಲಿ ಭಾಗವಹಿಸಿದರು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕೂಡ ಅವರೊಂದಿಗೆ ಹಾಜರಿದ್ದರು. ನಂತರ ಅವರು ತಮಿಳುನಾಡಿನ ಹಿಂದೂ ದಾರ್ಶನಿಕರ ಸಮ್ಮುಖದಲ್ಲಿ ಐತಿಹಾಸಿಕ 'ಸೆಂಗೊಲ್' ರಾಜದಂಡವನ್ನು ಕೆಳಮನೆಯಲ್ಲಿ ಸ್ಥಾಪಿಸಿದರು. 'ಸೆಂಗೊಲ್' ಅನ್ನು ಮೂಲತಃ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಬ್ರಿಟಿಷರು ನೀಡಿದ್ದರು. ಇದು ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ವರ್ಗಾವಣೆಯನ್ನು ಸಂಕೇತಿಸುತ್ತದೆ. 'ಸೆಂಗೊಲ್' ಎಂಬ ಪದವು 'ಸೆಮ್ಮೈ' ಎಂಬ ತಮಿಳು ಪದದಿಂದ ಬಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಕ್ವಿಕ್ ಕಾಮರ್ಸ್ ವಿಸ್ತಾರ: ಡೆಲಿವರಿ ಬಾಯ್ಗಳಿಗೆ ಹೆಚ್ಚುತ್ತಿರುವ ಬೇಡಿಕೆ