ನವದೆಹಲಿ:ವಿಮಾ ಪಾಲಿಸಿಯಲ್ಲಿ ಬೋನಸ್ ನೀಡುವುದಾಗಿ ಹೇಳಿ ವಂಚಕರು, ವ್ಯಕ್ತಿಯೊಬ್ಬರಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ. ಸುಮಾರು ಒಂದೂವರೆ ವರ್ಷದಲ್ಲಿ ವ್ಯಕ್ತಿಗೆ ಇಷ್ಟು ಹಣವನ್ನು ವಂಚಿಸಿದ್ದಾರೆ. ಪ್ರತಿ ಬಾರಿ ವಿಮಾ ಪಾಲಿಸಿಯ ಬೋನಸ್ ಹೆಚ್ಚಿದೆ ಎಂದು ಹೇಳಿದಾಗೆಲ್ಲಾ ಹಣ ಜಮಾ ಮಾಡುತ್ತಲೇ ಇದ್ದರು.
ಆರೋಪಿಗಳು ಅವರ ಕೆಲಸವನ್ನು ತ್ವರಿತವಾಗಿ ಮಾಡುವ ಸಲುವಾಗಿ ಅವರಿಂದಲೇ ಮೂರು ಮೊಬೈಲ್ ಫೋನ್‌ಗಳನ್ನು ಉಡುಗೊರೆಯಾಗಿ ತೆಗೆದುಕೊಂಡಿದ್ದರು. ಕೊನೆಗೆ ವಂಚನೆಗೊಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ರೋಹಿಣಿ ಸೈಬರ್ ಸೆಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ. ಈ ರೀತಿಯ ವಂಚನೆಯನ್ನು ಸೋಷಿಯಲ್ ಎಂಜಿನಿಯರಿಂಗ್ ವಂಚನೆ ಎಂದು ಕರೆಯಲಾಗುತ್ತದೆ ಎಂದು ಸೈಬರ್ ತಜ್ಞ ಮೋಹಿತ್ ಯಾದವ್ ಹೇಳಿದ್ದಾರೆ.
ಮಾಹಿತಿ ಪ್ರಕಾರ, ಶೇರ್ ಸಿಂಗ್ ಅವರು ಕುಟುಂಬ ಸಮೇತ ಕಂಝಾವಾಲಾದ ಕರಾಲಾ ಗ್ರಾಮದಲ್ಲಿ ವಾಸವಾಗಿದ್ದಾರೆ. ಅಕ್ಟೋಬರ್ 2019 ರಲ್ಲಿ, ಸುಷ್ಮಾ ತಿವಾರಿ ಎಂಬ ಯುವತಿ ಅವರಿಗೆ ಕರೆ ಮಾಡಿ, ನಾನು ಐಜಿಎಂಎಸ್ ಮುಂಬೈನಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಳು. ಬಳಿಕ Max Life Insurance ಪಾಲಿಸಿಯ ಮೇಲೆ ಬೋನಸ್ ಬಂದಿದೆ. ಇದಕ್ಕಾಗಿ ನೀವು 8,234 ರೂ. ಜೊತೆಗೆ ಆಧಾರ್ ಕಾರ್ಡ್, ರದ್ದಾದ ಚೆಕ್, ಪ್ಯಾನ್ ಕಾರ್ಡ್ ಮತ್ತು ಫೋಟೋವನ್ನು ನೀಡಬೇಕು ಎಂದು ತಿಳಿಸಿದ್ದಳು. ಅಕ್ಟೋಬರ್ 2019 ರಲ್ಲಿ, ಶೇರ್ ಸಿಂಗ್ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ಇದಾದ ನಂತರ ಮುಖೇಶ್ ಮೋಹನ್ ನೇಗಿ ಎಂಬ ವ್ಯಕ್ತಿ ಕರೆ ಮಾಡಿದ್ದ.