ಹೈದರಾಬಾದ್ : ಜನ ಸಾಮಾನ್ಯರು ನಿರಾಯಾಸವಾಗಿ ಮಾಡುವ ಪ್ರಕ್ರಿಯೆಯಲ್ಲಿ ನಿದ್ದೆಯೂ ಒಂದು. ಪ್ರತಿದಿನ ಚಟುವಟಿಕೆಯಿಂದ ಕೂಡಿರುವ ವ್ಯಕ್ತಿಗೆ ನಿಯಮಿತ ನಿದ್ದೆ ಅವಶ್ಯಕ. ನಿದ್ದೆಯು ಮಾನವನ ದೇಹಕ್ಕೆ ವಿಶ್ರಾಂತಿ ಪಡೆಯಲು ಸಹಕರಿಸುತ್ತದೆ. ಅಮೆರಿಕದ ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಪ್ರಪಂಚದಾದ್ಯಂತ ಸುಮಾರು ಮೂರನೇ ಒಂದು ಭಾಗದಷ್ಟು ಜನರು ನಿದ್ರೆಯ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜನರು ಸಾಮಾನ್ಯವಾಗಿ ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ನಿದ್ರಾಹೀನತೆ ಅಥವಾ ಇತರೆ ಯಾವುದೇ ನಿದ್ರಾ ಸಮಸ್ಯೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಗಾಢ ಪರಿಣಾಮ ಬೀರಬಹುದು.
ಭೋಪಾಲ್‌ನ ಆಯುರ್ವೇದ ವೈದ್ಯರಾದ ಡಾ ರಾಜೇಶ್ ಶರ್ಮಾ ಅವರು, ನಿದ್ರೆಯನ್ನು 'ತ್ರಯೋಪಸ್ತಂಭ' ಅಥವಾ ಜೀವನದ ಪ್ರಮುಖ ಮೂರು ಪೋಷಕ ಸ್ತಂಭಗಳಲ್ಲಿ ಒಂದು ಎಂದು ಹೇಳುತ್ತಾರೆ. ನಿದ್ರಾಹೀನತೆ ಅಥವಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಆಯುರ್ವೇದದಲ್ಲಿ ಪರಿಗಣಿಸಲಾಗಿದೆ.
ನಿದ್ರಾಹೀನತೆಯು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ವ್ಯಕ್ತಿಯ ಕಡಿಮೆ ನಿದ್ರೆ, ಕಳಪೆ ಗುಣಮಟ್ಟದ ನಿದ್ರೆಯನ್ನು ಒಳಗೊಂಡಿದೆ. ಈ ನಿದ್ರಾಹೀನತೆ ಸಮಸ್ಯೆಯು ಕೆಲವೊಮ್ಮೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಅಲ್ಲದೆ ಇದು ವ್ಯಕ್ತಿಯು ಮಾಡುವ ಕೆಲಸದ ಮೇಲೆ ಮತ್ತು ಆತನ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜೇಶ್ ಶರ್ಮಾ ಹೇಳುತ್ತಾರೆ.
ನಿದ್ರಾಹೀನತೆಯ ಸಾಮಾನ್ಯ ಲಕ್ಷಣಗಳು:
- ನಿದ್ರಾಹೀನತೆ ಅಥವಾ ಕಡಿಮೆ ನಿದ್ರೆ
- ಹಗಲಿನಲ್ಲಿ ಅರೆನಿದ್ರಾವಸ್ಥೆ ಅಥವಾ ಚಿಕ್ಕನಿದ್ರೆ
- ನಿದ್ರೆ ಮತ್ತು ಎಚ್ಚರದ ಸಮಯದಲ್ಲಿ ಬದಲಾವಣೆಗಳು
- ನಿದ್ರಿಸಲು ತೊಂದರೆ ಅಥವಾ ನಿದ್ರಾ ಭಂಗ
- ಹೆಚ್ಚಿದ ಆತಂಕ, ಉದ್ವೇಗ ಮತ್ತು ಚಡಪಡಿಕೆ
- ಹೆಚ್ಚಿದ ಕಿರಿಕಿರಿ ಮತ್ತು ಕೋಪದ ವರ್ತನೆ
- ಮರೆವು ಮತ್ತು ಏಕಾಗ್ರತೆಯ ಕೊರತೆ
ಸಾಮಾನ್ಯವಾಗಿ ವಯಸ್ಸಾದಂತೆ ನಿದ್ರೆಯ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಯುವಕರು ಮತ್ತು ವೃದ್ಧರಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿದ್ರಾಹೀನತೆಗೆ ಕಾರಣವಾಗಬಹುದು. ಇದೇ ರೀತಿ ಜೀವನಶೈಲಿಯ ಬದಲಾವಣೆಯೂ ನಿದ್ರಾಹೀನತೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ನಿದ್ರಾಹೀನತೆಗೆ ಕಾರಣವಾಗುವ ಸಾಮಾನ್ಯ ಅಂಶಗಳು :
1) ಮಾನಸಿಕ ಸಮಸ್ಯೆಗಳು: ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಅಂಶಗಳು ಹೆಚ್ಚಿನ ಸಂದರ್ಭಗಳಲ್ಲಿ ನಿದ್ರಾಹೀನತೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಒತ್ತಡದಿಂದಾಗಿ ಜನರು ನಿದ್ರಾಹೀನತೆಯ ಸಮಸ್ಯೆಯನ್ನು ಹೊಂದುತ್ತಾರೆ ಎಂದು ಹೇಳಲಾಗಿದೆ. ಈ ರೀತಿಯ ನಿದ್ರಾಹೀನತೆಯು ಒತ್ತಡದ ಸಂದರ್ಭಗಳು ನಿವಾರಣೆಯಾದಾಗ ದೂರವಾಗುತ್ತದೆ. ಒತ್ತಡ, ಖಿನ್ನತೆ ಅಥವಾ ಆತಂಕದಂತಹ ಸಮಸ್ಯೆಗಳು ಮಾನಸಿಕವಾಗಿ ಗಾಢ ಪರಿಣಾಮ ಬೀರಿದರೆ, ನಿದ್ರಾಹೀನತೆಯು ಒಂದು ಕಾಯಿಲೆಯಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ನಿದ್ರಾಹೀನತೆಯು ಅನೇಕ ರೀತಿಯ ಮಾನಸಿಕ ಅಸ್ವಸ್ಥತೆಗಳ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.
2) ಶಾರೀರಿಕ ಸಮಸ್ಯೆಗಳು: ಶಾರೀರಿಕ ಸಮಸ್ಯೆಗಳಿಂದಲೂ ನಿದ್ರಾಹೀನತೆ ಉಂಟಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಇತರ ಅನೇಕ ಕಾಯಿಲೆಗಳು ನಿದ್ರಾಹೀನತೆ ಕಾರಣವಾಗಬಹುದು. ಇದರ ಪಟ್ಟಿ ಕೆಳಗಿನಂತಿದೆ.
ದುರ್ಬಲ ಜೀರ್ಣಾಂಗ ವ್ಯವಸ್ಥೆ: ದುರ್ಬಲ ಜೀರ್ಣಾಂಗ ವ್ಯವಸ್ಥೆ ಹೊಂದಿರುವ ಜನರು ನಿದ್ರಾಹೀನತೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಜೀರ್ಣಿಸಿಕೊಳ್ಳಲು ಕಷ್ಟಕರವಾದ ಅಶಿಸ್ತಿನ ಮತ್ತು ಅಸಮತೋಲಿತ ಆಹಾರವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಲ್ಲದೆ ನಮ್ಮ ಚಯಾಪಚಯ ಕ್ರಿಯೆಯನ್ನು ಹಾನಿಗೊಳಿಸುತ್ತದೆ.