ಗಾಜಿಯಾಬಾದ್ (ಉತ್ತರಪ್ರದೇಶ) :ಜಾಗತಿಕ ವಿಮಾನ ತಯಾರಕ ಸಂಸ್ಥೆಯಾದ ಏರ್‌ಬಸ್‌ನಿಂದ ನಿರ್ಮಿಸಲಾಗಿರುವ C-295 ಹೆಸರಿನ ಮೊದಲ ಸಾರಿಗೆ ವಿಮಾನವನ್ನು ವಾಯುಪಡೆಗೆ ಇಂದು (ಸೋಮವಾರ) ಸೇರ್ಪಡೆ ಮಾಡಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ದೈತ್ಯ ಸಾರಿಗೆ ವಿಮಾನವನ್ನು ಸೇನೆಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಇಲ್ಲಿನ ಹಿಂದಾನ್ ಏರ್ ಫೋರ್ಸ್ ಸ್ಟೇಷನ್ನಲ್ಲಿ ನಡೆದ ಸಮಾರಂಭದಲ್ಲಿ ದೈತ್ಯ ಸಾರಿಗೆ ವಿಮಾನವನ್ನು ವಾಯಸೇನೆಗೆ ಸೇರಿಸಿ ಅದರ ಶಕ್ತಿಯನ್ನು ಬಲಪಡಿಸಲಾಯಿತು.
ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ, ಐಎಎಫ್ ಮತ್ತು ಏರ್‌ಬಸ್‌ನ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೊದಲ C-295 ವಿಮಾನವನ್ನು ವಾಯುಸೇನೆಯ 11ನೇ ಸ್ಕ್ವಾಡ್ರನ್ ತಂಡಕ್ಕೆ ನೀಡಲಾಯಿತು. ಇದು ಭಾರತೀಯ ವಾಯುಪಡೆಯ ಅತ್ಯಂತ ಹಳೆಯ ಸ್ಕ್ವಾಡ್ರನ್‌ಗಳಲ್ಲಿ ಒಂದಾಗಿದೆ. ಇದು ಪ್ರಸ್ತುತ ವಡೋದರಾ ಏರ್ಫೋರ್ಸ್ ಸ್ಟೇಷನ್‌ನಲ್ಲಿದೆ.
ಅದ್ಧೂರಿಯಾಗಿ ಆಯೋಜಿಸಿದ್ದ ಸೇರ್ಪಡೆ ಕಾರ್ಯಕ್ರಮದಲ್ಲಿ 11ನೇ ಸ್ಕ್ವಾಡ್ರನ್ ಬ್ಯಾಚ್ಗೆ ನೀಡಲಾದ C-295 ವಿಮಾನದ ಚಿತ್ರವನ್ನು ಪರದೆಯ ಮೇಲೆ ಸ್ಲೈಡ್ ಮಾಡಿ ಅನಾವರಣ ಮಾಡಲಾಯಿತು. ಒಂದು ಕೊಂಬಿನ ಘೇಂಡಾಮೃಗವು ಸ್ಕ್ವಾಡ್ರನ್ನ ಲಾಂಛನವಾಗಿದೆ.
56 ವಿಮಾನ ತಯಾರಿಕೆಗೆ ಒಪ್ಪಂದ:ವಾಯುಸೇನೆಯ ಬಳಿ ಸದ್ಯ ಹಳೆಯ ಅವ್ರೋ-748 ಫ್ಲೀಟ್ ವಿಮಾನವಿದೆ. ಇದು ಈಗಿನ ಸಾಮರ್ಥ್ಯಕ್ಕೆ ತಕ್ಕಷ್ಟು ಸಮರ್ಥವಾಗಿಲ್ಲದ್ದರಿಂದ ಜೆಟ್ ಮಾದರಿಯ ಸಾರಿಗೆ ವಿಮಾನ ತಯಾರಿಕೆಗಾಗಿ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್‌ನೊಂದಿಗೆ ಕೇಂದ್ರ ಸರ್ಕಾರ 21,935 ಕೋಟಿ ರೂಪಾಯಿ ಒಪ್ಪಂದವನ್ನು ಎರಡು ವರ್ಷಗಳ (2021) ಹಿಂದೆ ಮಾಡಿಕೊಂಡಿದೆ. ಅದರಂತೆ ಮೊದಲ ಸಿ-295 ವಿಮಾನವನ್ನು ಸೆಪ್ಟೆಂಬರ್ 13 ರಂದು ದಕ್ಷಿಣ ಸ್ಪ್ಯಾನಿಷ್ ನಗರದ ಸೆವಿಲ್ಲೆಯಲ್ಲಿ ಸೇನೆಗೆ ಹಸ್ತಾಂತರಿಸಲಾಗಿತ್ತು.