ಕೊಲ್ಹಾಪುರ(ಮಹಾರಾಷ್ಟ್ರ): ಫ್ರೆಂಚ್ ಫ್ಯಾಷನ್ ಹೌಸ್ 'ಚಾನೆಲ್'ನ ನೂತನ ಸಿಇಒ ಆಗಿ ಭಾರತ ಮೂಲದ ಲೀನಾ ನಾಯರ್ ಅವರನ್ನು ನೇಮಕ ಮಾಡಲಾಗಿದೆ. 2022ರ ಜನವರಿ ತಿಂಗಳಲ್ಲಿ ಲೀನಾ ಚಾನೆಲ್ ಸಂಸ್ಥೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಲೀನಾ ನಾಯರ್ ಈ ಮೊದಲು ಯುನಿಲಿವರ್ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದರು. ಕಳೆದ 30 ವರ್ಷಗಳಿಂದ ಲೀನಾ ನಾಯರ್ ಯುನಿಲಿವರ್ನಲ್ಲಿ ಕೆಲಸ ಮಾಡುತ್ತಿದ್ದು, 2022ರಲ್ಲಿ ಲೀನಾ ಫ್ರಾನ್ಸ್ ಫ್ಯಾಷನ್ ಸಂಸ್ಥೆಯಾದ ಚಾನೆಲ್ ಸಿಇಒ ಆಗಿ ಅಧಿಕಾರ ತೆಗೆದುಕೊಳ್ಳಲಿದ್ದಾರೆ.
ಲೀನಾ ನಾಯರ್ ಕೊಲ್ಹಾಪುರ ಮೂಲದವರು. ಇದೀಗ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಅಮೆರಿಕದ ಉದ್ಯಮಿ ಮೌರೀನ್ ಚಿಕ್ವೆಟ್ 9 ವರ್ಷಗಳ ಕಾಲ ‘ಚಾನೆಲ್’ನ ಸಿಇಒ ಆಗಿದ್ದರು. ಅವರ ಸ್ಥಾನಕ್ಕೆ ಲೀನಾ ನಾಯರ್ ನೇಮಕಗೊಂಡಿದ್ದಾರೆ.
ಅಭಿನಂದನೆಗಳ ಮಹಾಪೂರ :ಮಂಗಳವಾರ ಲೀನಾ ನಾಯರ್‌ಗೆ ಅತ್ಯಂತ ಗೌರವಾನ್ವಿತ ಸ್ಥಾನವನ್ನು ನೀಡಲಾಗಿದೆ. ಅದನ್ನು ಸ್ವೀಕರಿಸಲು ಲೀನಾ ಸಜ್ಜಾಗಿದ್ದಾರೆ. ಪ್ರಪಂಚದಾದ್ಯಂತದ ಹಿತೈಷಿಗಳಿಂದ ಶ್ಲಾಘನೆ ಮತ್ತು ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಲೀನಾ ನಾಯರ್ ಅವರು ಯೂನಿಲಿವರ್‌ನ ಅತ್ಯಂತ ಕಿರಿಯ ಮಹಿಳಾ ಉದ್ಯೋಗಿಯಾಗಿ, ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ತಮ್ಮ ವೃತ್ತಿ ಪ್ರಾರಂಭಿಸಿದರು.
ಆದರೆ, ಕ್ರಮೇಣ ಕಂಪನಿಯಲ್ಲಿ ತಮ್ಮ ಪ್ರತಿಭೆ ಮತ್ತು ತಮ್ಮ ಕಾರ್ಯಕ್ಷಮತೆಯಿಂದಾಗಿ ಉನ್ನತ ಮಟ್ಟ ಏರಿದರು. ಅವರ ಕಾರ್ಯಕ್ಷಮತೆ ಮತ್ತು ಯೂನಿಲಿವರ್‌ಗಾಗಿ ಕೆಲಸ ಮಾಡಿದ್ದನ್ನು ಪರಿಗಣಿಸಿ, ನಾಯರ್‌ಗೆ ಅಂತಾರಾಷ್ಟ್ರೀಯ ಐಷಾರಾಮಿ ಬ್ರ್ಯಾಂಡ್ ಚಾನೆಲ್ನಲ್ಲಿ ಗ್ಲೋಬಲ್ ಸಿಇಒ ಸ್ಥಾನವನ್ನು ನೀಡಲಾಯಿತು.
ಧನ್ಯವಾದ ಸಮರ್ಪಣೆ :ಈ ವಿಚಾರವನ್ನು ಸ್ವತಃ ಅವರೇ ತಮ್ಮ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಮತ್ತು ಇಷ್ಟು ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಕ್ಕಾಗಿ ಚಾನೆಲ್‌ನ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಹಿನ್ನೆಲೆ :ನಾಯರ್ ಮೂಲತಃ ಮಹಾರಾಷ್ಟ್ರದ ಕೊಲ್ಹಾಪುರ ನಗರದವರು. ಅಲ್ಲಿ ಹೋಲಿ ಕ್ರಾಸ್ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ನಂತರ ಸಾಂಗ್ಲಿಯ ವಾಲ್‌ಚಂದ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅನ್ನು ಮುಗಿಸಿದರು. ಬಳಿಕ ಜೆಮ್ಶೆಡ್ಪುರದಲ್ಲಿ ಮ್ಯಾನೇಜ್‌ಮೆಂಟ್ ಪದವಿ ಮುಗಿಸಿದರು.
ಇದನ್ನೂ ಓದಿ:ಮುಂಬೈ ಷೇರುಪೇಟೆಯಲ್ಲಿ ಮುಂದುವರಿದ ಕರಡಿ ಕುಣಿತ; ಸೆನ್ಸೆಕ್ಸ್ 200 ಅಂಕಗಳ ಕುಸಿತ
ಲೀನಾ ನಾಯರ್ ಯಾವಾಗಲೂ ಉತ್ಸಾಹಭರಿತ ವಿದ್ಯಾರ್ಥಿಯಾಗಿದ್ದರು, ಓದಿನಲ್ಲಿ ಚುರುಕಿದ್ದರು. ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಚಿನ್ನದ ಪದಕ ಸೇರಿದಂತೆ ಹಲವಾರು ಪ್ರಶಸ್ತಿಗಳು ಪಡೆದು ಹಲವು ಸಾಧನೆ ಮಾಡಿದ್ದಾರೆ.