ನವದೆಹಲಿ: 70ನೇ ವಯಸ್ಸಿನಲ್ಲಿ ವೃದ್ಧೆಯೊಬ್ಬರು ತಾಯಿಯಾಗುವ ಮೂಲಕ ಮಗುವಿನ ಕನಸನ್ನು ನನಸು ಮಾಡಿಕೊಂಡಿರುವ ಘಟನೆ ಗುಜರಾತ್‌ನ ಮೋರಾ ಎಂಬ ಗ್ರಾಮದಲ್ಲಿ ನಡೆದಿದೆ. ಜೀವನ್ ಬೆನ್ ರಬಾರಿ ಎಂಬ 70 ವರ್ಷದ ವೃದ್ಧೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮೂಲಕ ತನ್ನ ಪತಿ ಮಾಲ್ಧಾರಿ (75) ಅವರ ಆಸೆಯನ್ನು ಈಡೇರಿಸಿದ್ದಾರೆ.
ಈ ವೃದ್ಧ ದಂಪತಿಗೆ ಮದುವೆಯಾಗಿ ದಶಕ- ದಶಕಗಳು ಉರುಳಿದರೂ ಮಕ್ಕಳ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಐವಿಎಫ್(ಪ್ರನಾಳ ಶಿಶು ಸೃಷ್ಟಿ) ಮೂಲಕ ಮಗುವಿಗೆ ಜನ್ಮ ನೀಡಿದ್ದೇನೆ. ತನ್ನ ವಯಸ್ಸಿನ ಬಗ್ಗೆ ಸಾಬೀತುಪಡಿಸಲು ಯಾವುದೇ ದಾಖಲೆಗಳು ಇಲ್ಲ ಎಂದು ರಬಾರಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದೆ.
ಈ ಬಗ್ಗೆ ವೈದ್ಯ ನರೇಶ್ ಭಾನುಶಾಲಿ ಆಶ್ಚರ್ಯ ವ್ಯಕ್ತಪಡಿಸಿದ್ದು, ಬಹಳ ವಿರಳಾತಿ ವಿರಳವಾಗಿ ಇಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ. ವೃದ್ಧ ದಂಪತಿ ಮೊದಲು ನಮ್ಮ ಬಳಿಗೆ ಬಂದಾಗ ಈ ವಯಸ್ಸಿನಲ್ಲಿ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದ್ದೆವು. ಆದರೆ, ಅವರು ಕೇಳಲಿಲ್ಲ ಎಂದಿದ್ದಾರೆ.
ಸಾಮಾನ್ಯವಾಗಿ 70 ವರ್ಷದ ಮಹಿಳೆ ಗರ್ಭಧರಿಸಲು ಸಾಧ್ಯವಿಲ್ಲ. ಅವರು 48 ವರ್ಷದ ನಂತರ ಋತು ಬಂಧ ತಲುಪುತ್ತಾರೆ. ಆದರೂ 'ಅಮೆರಿಕನ್ ಸೊಸೈಟಿ ಆಫ್ ರಿಪ್ರೊಡಕ್ಟಿವ್ ಮೆಡಿಸಿನ್' ಸಂಸ್ಥೆ ಮಾತ್ರ ವಯಸ್ಸಾದ ಮಹಿಳೆಯರು ಕೂಡ ತಾಯಿಯಾಗಬಹುದು ಎಂದು ಹೇಳುತ್ತದೆ. ಆದರೆ, ಅವರು ಸಾಮಾನ್ಯ ಗರ್ಭಕೋಶ ಹೊಂದಿದ್ದರೆ ಮಾತ್ರ ಇದು ಸಾಧ್ಯ ಎಂದು ಹೇಳಿದ್ದಾರೆ.
ಐಪಿಎಫ್ ಪದ್ದತಿಯಲ್ಲಿ ಪುರುಷ ವೀರ್ಯ ದಾನ ಮಾಡಿದ ಮೊಟ್ಟೆಗಳನ್ನು ದೇಹದ ಹೊರಗೆ ಫಲವತ್ತಾಗಿಸಲಾಗುತ್ತದೆ. ನಂತರ ತಾಯಿಯಾಗಲು ಬಯಸುವ ಮಹಿಳೆಯ ಗರ್ಭಾಶಯದಲ್ಲಿ ಭ್ರೂಣ ಅಳವಡಿಸಲಾಗುತ್ತದೆ. ಸದ್ಯ ಈ ವೃದ್ಧೆಯನ್ನು ಅಧಿಕೃತವಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನಮೂದಿಸಲಾಗಿಲ್ಲ. ಈ ದಾಖಲೆ ಸ್ಪೇನ್‌ನ ಮಾರಿಯಾ ಡೆಲ್ ಕಾರ್ಮೆನ್ ಬೌಸಾಡಾ ಡಿ ಲಾರಾ ಅವರ ಹೆಸರಿನಲ್ಲಿದೆ. 2006 ರಲ್ಲಿ 66 ವರ್ಷ 358 ದಿನಗಳ ವಯಸ್ಸಿನಲ್ಲಿ ಲಾರಾ ಗಂಡು ಅವಳಿಗಳಿಗೆ ಜನ್ಮ ನೀಡಿದ್ದರು. ಇದು ಈವರೆಗಿನ ದಾಖಲೆಯಾಗಿದೆ.