ನವದೆಹಲಿ: ಭಾರತದ ಪ್ರಜಾಪ್ರಭುತ್ವವು ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಪರಿಚಯಿಸಲು ಜನರನ್ನು ಪ್ರೇರೇಪಿಸುತ್ತದೆ. ಪ್ರತಿಯೊಬ್ಬರ ದೃಷ್ಟಿಯೂ ದೇಶದ ವಿಕಾಸದತ್ತವೇ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ನೆಹರೂ ಮ್ಯೂಸಿಯಂನಲ್ಲಿ ಗುರುವಾರ 'ಪ್ರಧಾನಮಂತ್ರಿ ಸಂಗ್ರಹಾಲಯ' ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪ್ರಧಾನಿಯೂ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಗುರಿಗಳ ಈಡೇರಿಕೆಗೆ ಪ್ರಧಾನಿಗಳ ಕೊಡುಗೆ ಇದೆ. ಇಂದು ಈ ಸಂಗ್ರಹಾಲಯವನ್ನು ರಾಷ್ಟ್ರಕ್ಕೆ ಅರ್ಪಿಸುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಸ್ವತಂತ್ರ ಭಾರತದ ಇತಿಹಾಸದೊಂದಿಗೆ ಎಲ್ಲ ಪ್ರಧಾನಿಗಳನ್ನು ಈ ಸಂಗ್ರಹಾಲಯ ನೆನಪಿಸುತ್ತದೆ ಎಂದು ತಿಳಿಸಿದರು.
ಅಲ್ಲದೇ, ಇವತ್ತು ಇಡೀ ವಿಶ್ವವೇ ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಈ 'ಪ್ರಧಾನಮಂತ್ರಿ ಸಂಗ್ರಹಾಲಯ'ಕ್ಕೆ ಯಾರದ್ದೇ ಹೆಸರು ಸೇರಿದರೂ ಅದು ನವ ಭಾರತದ ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಜಗತ್ತು ನಮ್ಮ ದೇಶದತ್ತ ವಿಶ್ವಾಸದಿಂದ ನೋಡುತ್ತಿದ್ದು ನಾವು ಮುಂದಿನ 25 ವರ್ಷಗಳಲ್ಲಿ ಹೊಸ ಎತ್ತರವನ್ನು ತಲುಪಬೇಕಿದೆ ಎಂದರು.