ವಾಷಿಂಗ್ಟನ್(ಅಮೆರಿಕ):ಭಾರತ - ಚೀನಾ ಗಡಿ ವಿವಾದದಲ್ಲಿ ಭಾರತದ ಪರ ನಿಲ್ಲುವುದಾಗಿ ತಿಳಿಸಿರುವ ಅಮೆರಿಕ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಬಗ್ಗೆಯೂ ಮಾತನಾಡಿದೆ.
ಈ ವರ್ಷ ಭಾರತ ಮತ್ತು ಅಮೆರಿಕ ಕೊರೊನಾ ಸಾಂಕ್ರಾಮಿಕ, ಹವಾಮಾನ ಬದಲಾವಣೆ ವಿರುದ್ಧದ ಹೋರಾಟ, ಕ್ವಾಡ್ ವಿಸ್ತರಣೆ, ಹೊಸ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಪಾಲುದಾರರಾಗಲಿದ್ದೇವೆ ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಭೆ ಉಭಯ ದೇಶಗಳ ಸಂಬಂಧ ಸುಧಾರಣೆಗೆ ಹೊಸ ಅಧ್ಯಾಯ ಬರೆದಿತ್ತು. ಅದರಂತೆ ಎರಡೂ ರಾಷ್ಟ್ರಗಳು ವಿದೇಶಾಂಗ ಮತ್ತು ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಪರಸ್ಪರ ಸಹಕರಿಸಲಿವೆ ಎಂದು ಅವರು ತಿಳಿಸಿದ್ದಾರೆ.