ನವದೆಹಲಿ:ವಿದೇಶಗಳಲ್ಲಿ ಆಶ್ರಯ ಪಡೆದಿರುವ ದೇಶಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು, ಅವರನ್ನು ಹಸ್ತಾಂತರಿಸಲು ಮತ್ತು ಆರ್ಥಿಕ ಅಪರಾಧಿಗಳ ಆಸ್ತಿಗಳನ್ನು ಪತ್ತೆಹಚ್ಚಲು ಸಾಮಾನ್ಯ ವೇದಿಕೆಯೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜಿ 20 ನಾಯಕರನ್ನು ಒತ್ತಾಯಿಸಲು ಕೇಂದ್ರ ಸರ್ಕಾರ ಕಾರ್ಯತಂತ್ರವೊಂದನ್ನು ರೂಪಿಸಿದೆ. ಈ ಕಾರ್ಯತಂತ್ರವು ಎಲ್ಲ ಜಿ 20 ನಾಯಕರ ಬೆಂಬಲ ಪಡೆದದ್ದೇ ಆದಲ್ಲಿ ವಿಜಯ್ ಮಲ್ಯ, ನೀರವ್ ಮೋದಿ, ಜುನೈದ್ ಇಕ್ಬಾಲ್ ಮೆಮನ್ ಮತ್ತು ಅಭಿಜಿತ್ ಅಸೋಮ್ ಅವರಂತಹ ಹಲವಾರು ದೇಶಭ್ರಷ್ಟ ಮತ್ತು ಆರ್ಥಿಕ ಅಪರಾಧಿಗಳನ್ನು ಮರಳಿ ಕರೆತರಲು ಭಾರತಕ್ಕೆ ಅನುವು ಮಾಡಿಕೊಡಲಿದೆ.
ತಾವು ವಾಸಿಸುತ್ತಿರುವ ದೇಶದಲ್ಲಿ ತೆರಿಗೆ ಬಾಕಿ ಹೊಂದಿರುವ ಆರ್ಥಿಕ ಅಪರಾಧಿಗಳ ಆಸ್ತಿಗಳನ್ನು ಪತ್ತೆಹಚ್ಚಲು ನಿಯಮಗಳನ್ನು ರೂಪಿಸಲಾಗುವುದು ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಈಟಿವಿ ಭಾರತ್ ಗೆ ತಿಳಿಸಿದ್ದಾರೆ. ಅಂಥ ಜಾಗತಿಕ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ತರಲು ಜಿ 20 ಅತ್ಯುತ್ತಮ ವೇದಿಕೆಯಾಗಿದೆ ಎಂದು ಪ್ರತಿಪಾದಿಸಿದ ಈ ಅಧಿಕಾರಿ, ಆರ್ಥಿಕ ಅಪರಾಧಗಳಿಂದ ಪಲಾಯನ ಮಾಡಿದವರ ವಿರುದ್ಧ ಕ್ರಮ ಮತ್ತು ಆಸ್ತಿ ವಸೂಲಾತಿಗಾಗಿ ಭಾರತವು ಒಂಬತ್ತು ಅಂಶಗಳ ಕಾರ್ಯಸೂಚಿಗೆ ಒತ್ತಾಯಿಸುತ್ತಿದೆ ಎಂದು ಹೇಳಿದರು.
ಆರ್ಥಿಕ ಅಪರಾಧಿಗಳನ್ನು ಯಶಸ್ವಿಯಾಗಿ ಹಸ್ತಾಂತರ ಮಾಡುವುದು, ಅಸ್ತಿತ್ವದಲ್ಲಿರುವ ಹಸ್ತಾಂತರ ವ್ಯವಸ್ಥೆಗಳಲ್ಲಿನ ದೌರ್ಬಲ್ಯಗಳು ಮತ್ತು ಕಾನೂನು ನೆರವು ಸೇರಿದಂತೆ ಅನುಭವಗಳು ಮತ್ತು ಉತ್ತಮ ಕಾರ್ಯತಂತ್ರಗಳನ್ನು ಹಂಚಿಕೊಳ್ಳಲು ಸಾಮಾನ್ಯ ವ್ಯವಸ್ಥೆಯೊಂದನ್ನು ರೂಪಿಸಬೇಕಿದೆ ಎಂದು ಅಧಿಕಾರಿ ಹೇಳಿದರು. ಈ ವಿಷಯದಲ್ಲಿ ಎಲ್ಲ ಜಿ-20 ರಾಷ್ಟ್ರಗಳ ಮಧ್ಯೆ ಜಂಟಿ ಕಾರ್ಯಯೋಜನೆ ಸಾಧ್ಯವಾದಲ್ಲಿ ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ಬೇರೆ ದೇಶಗಳಲ್ಲಿ ಸುರಕ್ಷಿತವಾಗಿ ಅಡಗಿಕೊಳ್ಳುವುದನ್ನು ತಡೆಗಟ್ಟಬಹುದು ಎಂದು ಅಧಿಕಾರಿ ಹೇಳಿದರು.
10 ಜನರನ್ನು ದೇಶಭ್ರಷ್ಟ ಎಂದು ಘೋಷಿಸಿರುವ ಕೋರ್ಟ್ಗಳು:ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ, 2018 (ಎಫ್ಇಒಎ) ಅಡಿ ಭಾರತೀಯ ಕಾನೂನು ಜಾರಿ ಸಂಸ್ಥೆಗಳು 19 ಜನರ ವಿರುದ್ಧ ಅರ್ಜಿಗಳನ್ನು ಸಲ್ಲಿಸಿವೆ. ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯ್ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಸೇರಿದಂತೆ 19 ಜನರ ಪೈಕಿ 10 ಜನರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳು (ಎಫ್ಇಒ) ಎಂದು ಭಾರತದ ನ್ಯಾಯಾಲಯಗಳು ಘೋಷಿಸಿವೆ.