ನವದೆಹಲಿ:ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿದ್ದ ಕೆನಡಾಗೆ ಕೇಂದ್ರ ಸರ್ಕಾರ ಮತ್ತೊಂದು ಭರ್ಜರಿ ಶಾಕ್ ನೀಡಿದೆ. ಕೆನಡಿಯನ್ನರಿಗೆ ಭಾರತದ ವೀಸಾ ಸೇವೆ ಸ್ಥಗಿತಗೊಳಿಸಿ ಗುರುವಾರ ಆದೇಶಿಸಿದೆ. ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಜರುಗಿಸಿದೆ.
ಖಲಿಸ್ತಾನಿಗಳ ವಿಚಾರವಾಗಿ ಎರಡೂ ರಾಷ್ಟ್ರಗಳ ಮಧ್ಯೆ ತಿಕ್ಕಾಟ ನಡೆಯುತ್ತಿದ್ದು, ಭಾರತ ಸರ್ಕಾರ ಕೆನಡಿಯನ್ನರ ವೀಸಾ ಸ್ಥಗಿತಗೊಳಿಸಿದೆ. ಈ ಬಗ್ಗೆ ಕೆನಡಾದ ಖಾಸಗಿ ಏಜೆನ್ಸಿಯು ತನ್ನ ವೆಬ್ಸೈಟ್ನಲ್ಲಿ ಭಾರತೀಯ ವೀಸಾ ಸೇವೆಗಳನ್ನು 'ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಲಾಗಿದೆ' ಎಂದು ಬರೆದುಕೊಂಡಿದೆ.
ಭಾರತದ ಕ್ರಮಕ್ಕೆ ಕಾರಣವೇನು?:ಭಾರತದ ವಿರುದ್ಧ ಕೆನಡಾದಲ್ಲಿ ಪಿತೂರಿ ನಡೆಸುತ್ತಿರುವ ಖಲಿಸ್ತಾನಿಗಳಿಗೆ ಅಲ್ಲಿನ ಸರ್ಕಾರ ಬೆಂಬಲ ನೀಡುತ್ತಿದೆ. ಜೂನ್ 29 ರಂದು ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಈ ಹತ್ಯೆಯಲ್ಲಿ ಭಾರತದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ನೇರ ಆರೋಪ ಮಾಡಿದ್ದರು. ಬಳಿಕ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ದೇಶದಿಂದ ಉಚ್ಚಾಟಿಸಿತ್ತು.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪವನ್ನು ಭಾರತ ಸರ್ಕಾರ ತಿರಸ್ಕರಿಸಿತ್ತು. ಇದು ಅಸಂಬದ್ಧ ಮತ್ತು ಪ್ರೇರಿತ ಆರೋಪ ಎಂದು ಜರಿದಿತ್ತು. ನಮ್ಮ ದೇಶ ಪ್ರಜಾಪ್ರಭುತ್ವದ ಕಾನೂನಾತ್ಮಕ ಆಳ್ವಿಕೆಗೆ ಒಳಪಟ್ಟ ಪ್ರಜಾಸತ್ತಾತ್ಮಕ ರಾಜಕೀಯವಾಗಿದೆ. ಉಗ್ರನ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿಕೆ ತಿರುಗೇಟು ನೀಡಿತ್ತು. ಇದಾದ ಕೆನಡಾ ಕೆನಡಾ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಯನ್ನು ಉಚ್ಚಾಟಿಸಿ ಪ್ರತೀಕಾರ ತೀರಿಸಿಕೊಂಡಿತ್ತು.