ನವದೆಹಲಿ: ಇದೇ ಮೊದಲ ಬಾರಿ ಭಾರತದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ ಎರಡು ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗಿದೆ. ಮತ್ತೆ ನಿನ್ನೆಯಿಂದ ಸಾವಿನ ಸಂಖ್ಯೆ ಸಾವಿರ ಗಡಿ ದಾಟುತ್ತಿದ್ದು, ಜನರು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಕುತ್ತು ಎಂಬುದು ಮರೆಯಬಾರದು.
ಕಳೆದ 24 ಗಂಟೆಗಳಲ್ಲಿ 2,00,739 ಸೋಂಕಿತರು ಪತ್ತೆಯಾಗಿದ್ದು, 1027 ಮಂದಿ ಬಲಿಯಾಗಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 1,40,74,564 ಲಕ್ಷಕ್ಕೇರಿಕೆಯಾಗಿದ್ದು, ಈವರೆಗೆ 1,73,123 ಜನರು ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 14 ಲಕ್ಷಕ್ಕೇರಿಕೆ
ಬುಧವಾರ 93,528 ಕೋವಿಡ್ ರೋಗಿಗಳು ಗುಣಮುಖರಾಗಿದ್ದು, ಇಲ್ಲಿಯವರೆಗೆ 1,24,29,564 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 14,71,877ಕ್ಕೆ ಹೆಚ್ಚಳವಾಗಿದ್ದು, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಕೇರಳ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲಿ ಶೇ.70ರಷ್ಟು ಕೇಸ್ಗಳು ಆ್ಯಕ್ಟಿವ್ ಆಗಿವೆ.
ಲಸಿಕೆ ಪಡೆದ ಮೇಲೂ ಎಚ್ಚರ..
ಇತ್ತ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಕೂಡ ನಡೆಯುತ್ತಲೇ ಇದ್ದು, ಜನವರಿ 16ರಿಂದ ಈವರೆಗೆ ಒಟ್ಟು 11,44,93,238 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯುವವರೆಗೂ ಹಾಗೂ ಪಡೆದ ಮೇಲೂ ಮಾಸ್ಕ್, ಸಾಮಾಜಿಕ ಅಂತರದಂತಹ ಕೋವಿಡ್ ನಿಯಮಗಳನ್ನು ಪಾಲಿಸಲೇಬೇಕಿದೆ.