ನವದೆಹಲಿ: ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಉಗ್ರ ಸಂಘಟನೆಯ ಸಂಸ್ಥಾಪಕ, 26/11ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಭಾರತ ಅಧಿಕೃತವಾಗಿ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕನ ಹಸ್ತಾಂತರಕ್ಕೆ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿರುವ ಭಾರತ, ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ಔಪಚಾರಿಕ ಮನವಿ ರವಾನಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆ ಸಚಿವಾಲಯ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸಯೀದ್ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ. 2008ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಈತನ ಬಂಧನಕ್ಕೆ ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಅಮೆರಿಕದ ಕ್ರಮವನ್ನು ಭಾರತ ಅಧಿಕೃತವಾಗಿ ಬೆಂಬಲಿಸಿತ್ತು. ಮತ್ತೊಂದೆಡೆ, ಇದರ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಮತ್ತೊಂದೆಡೆ, ಮುಂಬೈ ದಾಳಿ ಪ್ರಕರಣದ ವಿಚಾರಣೆ ಎದುರಿಸಲು ಸಯೀದ್ ಹಸ್ತಾಂತರಕ್ಕೆ ಭಾರತ ಪದೇ ಪದೇ ಒತ್ತಾಯಿಸುತ್ತಿದೆ. ಆದರೆ, ಉಭಯ ದೇಶಗಳ ನಡುವೆ ಹಸ್ತಾಂತರ ಒಪ್ಪಂದ ಇರದೇ ಇರುವುದು ಇದಕ್ಕೆ ಅಡ್ಡಿಯಾಗಿದೆ. ಸದ್ಯ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯದಿಂದ 31 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಸಯೀದ್ ಜೈಲಿನಲ್ಲಿದ್ದಾನೆ ಎಂದು ವರದಿಯಾಗಿದೆ. ಆದಾಗ್ಯೂ, ಈತನ ಬಂಧನದ ಕುರಿತಾಗಿ ಯಾವುದೇ ಖಚಿತ ಪುರಾವೆಗಳು ಇದುವರೆಗೂ ಲಭ್ಯವಾಗಿಲ್ಲ.