ಇದುವರೆಗೆ ಕಂಡ ಅತ್ಯಂತ ಕೆಟ್ಟ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ನಂತರ ಭಾರತ ನಿಧಾನವಾಗಿ ಪ್ರಗತಿಯನ್ನು ಮತ್ತೆ ದಾಖಲಿಸ ತೊಡಗಿದೆ. ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಮತ್ತು ದೇಶಾದ್ಯಂತ ಲಸಿಕೆ ವಿತರಣೆಯಾಗತೊಡಗಿರುವುದು ಆರ್ಥಿಕ ಪುನರುಜ್ಜೀವನಕ್ಕೆ ಹೊಸ ಭರವಸೆಯನ್ನು ನೀಡ ತೊಡಗಿದೆ.
ಆರ್ಥಿಕ ಬೆಳವಣಿಗೆಯ ಕೆಲವು ಸೂಚಕಗಳ ಅಂಕಿ ಅಂಶಗಳು ಕೂಡ ಇದನ್ನೇ ಸೂಚಿಸುತ್ತಿವೆ. ಉದಾಹರಣೆಗೆ, 2020ರ ಡಿಸೆಂಬರ್‌ನಲ್ಲಿ ಉತ್ಪಾದನಾ ಚಟುವಟಿಕೆ ಬಲಗೊಳ್ಳುವುದು ಮುಂದುವರೆದಿತ್ತು. ದಾಸ್ತಾನುಗಳನ್ನು ಪುನರ್ ನಿರ್ಮಿಸುವ ಪ್ರಯತ್ನಗಳ ನಡುವೆಯೇ ವ್ಯವಹಾರಗಳು ಉತ್ಪಾದನೆಯನ್ನು ಹೆಚ್ಚಿಸಿದ್ದವು. ಸಮಯಕ್ಕೆ ಸೂಕ್ತವಾಗುವಂತೆ ಮರು ಹೊಂದಿಕೆ ಮಾಡಲಾಗಿದ್ದ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕವು ನವೆಂಬರ್‌ನಲ್ಲಿ 56.3ಕ್ಕಿಂತ ಸ್ವಲ್ಪ ಹೆಚ್ಚು, ಅಂದರೆ, 56.4ರಷ್ಟಿತ್ತು.
ಮತ್ತೊಂದೆಡೆ, ಆರ್ಥಿಕತೆಯ ಬೇಡಿಕೆಯ ಪ್ರಮುಖ ಸೂಚಕಗಳ ಪೈಕಿ ಒಂದಾಗಿರುವ ಪ್ರಯಾಣಿಕ ವಾಹನಗಳ ಮಾರಾಟವು 2019ರ ಅವಧಿಗೆ ಹೋಲಿಸಿದರೆ, 2020ರ ಡಿಸೆಂಬರ್‌ನಲ್ಲಿ ಶೇಕಡಾ 14ರಷ್ಟು ಹೆಚ್ಚಾಗಿದೆ. ಮಾರುಕಟ್ಟೆಗಳು ಸಹ ಭಾರಿ ಪ್ರಮಾಣದ ತೇಜಿಗೆ ಸಾಕ್ಷಿಯಾದವು. ಜನವರಿ 21, 2021ರಂದು ಮೊದಲ ಬಾರಿಗೆ ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠ 50,000 ಮಾನ ದಂಡವನ್ನು ದಾಟಿತು. 2020ರ ಏಪ್ರಿಲ್‌ನಲ್ಲಿ ದೇಶವು ಮೊದಲ ಬಾರಿ ಲಾಕ್‌ಡೌನ್‌ಗೆ ಹೋದಾಗ ಇದ್ದ ಮೌಲ್ಯಕ್ಕೆ ಹೋಲಿಸಿದರೆ, ಇದು ಸುಮಾರು ಶೇಕಡಾ 70ರಷ್ಟು ಹೆಚ್ಚಾಗಿದೆ.
ಇವೆಲ್ಲವುಗಳ ಜೊತೆಗೆ ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ಮಾಸಿಕ ಬುಲೆಟಿನ್‌ನಲ್ಲಿ ಭಾರತೀಯ ಆರ್ಥಿಕತೆಯ ಬಗ್ಗೆ ಸಕಾರಾತ್ಮಕ ಭರವಸೆಯನ್ನು ವ್ಯಕ್ತಪಡಿಸಿದ್ದು, ಚೇತರಿಕೆಯತ್ತ ಸಾಗುತ್ತಿದೆ ಎಂದು ಹೇಳಿದೆ. ಸ್ವಾತಂತ್ರ್ಯ ನಂತರದ ಭಾರತದ ಬೆಳವಣಿಗೆಯ ಅತ್ಯಂತ ನಕಾರಾತ್ಮಕ ಬೆಳವಣಿಗೆ 2020ರ ಮೊದಲ ತ್ರೈಮಾಸಿಕದಲ್ಲಿ ದಾಖಲಾಗಿದ್ದು, ಆ ಅವಧಿಯಲ್ಲಿ ಶೇಕಡಾ 23.9ರಷ್ಟು ಹಿನ್ನಡೆ ಅನುಭವಿಸಿದ ದೇಶದ ಆರ್ಥಿಕತೆಗೆ ಮೇಲೆ ತಿಳಿಸಿದ ಸೂಚಕಗಳ ಕಾರ್ಯಕ್ಷಮತೆ ಮತ್ತು ಮಾರುಕಟ್ಟೆಗಳ ಪ್ರತಿಕ್ರಿಯೆಯು ಸಾಕಷ್ಟು ನೆಮ್ಮದಿ ತಂದಿದೆ.
ಆರ್ಥಿಕತೆಯ ಕಾರ್ಯಕ್ಷಮತೆ ಪ್ರಗತಿಯತ್ತ ಸಾಗಿದೆ ಎಂಬುದನ್ನು ಬಿಂಬಿಸುವ ಈ ಸಕಾರಾತ್ಮಕ ಸುದ್ದಿಗಳು ಸ್ವಾಗತಾರ್ಹವಾದರೂ, ಬೆಳವಣಿಗೆಯ ಮುಂಚೂಣಿಯಲ್ಲಿ ನಾವು ಸಾಧಿಸತೊಡಗಿದ ಪ್ರಗತಿಯನ್ನು ಹದಗೆಡಿಸುವಂತಹ ಶಕ್ತಿಗಳ ವಿರುದ್ಧ ನಮ್ಮ ನೀತಿ ನಿರೂಪಕರು ಹೊಂದಿರುವ ಹೋರಾಟವನ್ನು ಸಡಿಲಗೊಳಿಸುವುದನ್ನು ಅವು ಮಾಡುವಂತಿರಬಾರದು. ಒಂದೆರಡು ದಿನಗಳಲ್ಲಿ ಬಜೆಟ್ ಮಂಡಿಸಲು ಹಣಕಾಸು ಸಚಿವರು ಸಜ್ಜಾಗಿರುವ ಈ ಸಮಯದಲ್ಲಿ ಇನ್ನೂ ಸುಪ್ತವಾಗಿಯೇ ಇರುವ ಆರ್ಥಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಸಂದರ್ಭ ಇದಾಗಿದ್ದು, ಇದಕ್ಕೆ ಆದ್ಯತೆಯ ಆಧಾರದ ಮೇಲೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.
ಸವಾಲುಗಳು ಇನ್ನೂ ಹಾಗೇ ಉಳಿದಿವೆ:
ಮೊದಲ ಮತ್ತು ಪ್ರಮುಖ ಸವಾಲು ಎಂದರೆ ಕೋವಿಡ್-19 ಸಾಂಕ್ರಾಮಿಕವು ಇಡೀ ದೇಶವನ್ನು ಆವರಿಸಿಕೊಂಡ ನಂತರ ಗಾಢವಾಗಿರಬಹುದಾದ ಹಾಗೂ ವಿಸ್ತಾರಗೊಂಡಿರಬಹುದಾದ ಆದಾಯದ ಅಸಮಾನತೆಗಳು. ಸಾಂಕ್ರಾಮಿಕವನ್ನು ಹಾಗೂ ಆದಾಯದ ಪರಿಣಾಮಗಳನ್ನು ನಿಭಾಯಿಸುವ ಸಾಮರ್ಥ್ಯವು ಸಮಾಜದ ವಿವಿಧ ವರ್ಗಗಳಿಗೆ ಭಿನ್ನವಾಗಿರುತ್ತದೆ ಎಂಬ ವಾಸ್ತವವೇ ಇದಕ್ಕೆ ಕಾರಣ. ಒಂದೆಡೆ ಕಾರ್ಮಿಕ ವರ್ಗವು ಉದ್ಯೋಗಗಳನ್ನು ಕಳೆದುಕೊಂಡು, ಅವರ ಉಳಿತಾಯವು ಕ್ಷೀಣಿಸುತ್ತ ಸಾಗಿದ್ದರೆ, ಇನ್ನೊಂದೆಡೆ ಅದೇ ಸಮಯದಲ್ಲಿ ಪ್ರವರ್ಧಮಾನಕ್ಕೆ ಬಂದ ಮತ್ತೊಂದು ವರ್ಗವಿದೆ.
ಆಕ್ಸ್‌ಫ್ಯಾಮ್ ವರದಿಯಿಂದ ಈ ಬೆಳವಣಿಗೆ ಸ್ಪಷ್ಟವಾಗಿದ್ದು, ಕಳೆದ 10 ತಿಂಗಳಲ್ಲಿ ಭಾರತೀಯ ಕೋಟ್ಯಾಧಿಪತಿಗಳ ಸಂಪತ್ತು ಶೇಕಡಾ 35ರಷ್ಟು ಹೆಚ್ಚಾಗಿದೆ ಎಂದು ಅದು ಸೂಚಿಸುತ್ತದೆ. ಈ ವರದಿಯ ಪ್ರಕಾರ, ಸದರಿ ಅವಧಿಯಲ್ಲಿ ಅಗ್ರ 100 ಶತಕೋಟ್ಯಾಧಿಪತಿಗಳ ಸಂಪತ್ತಿನಲ್ಲಾದ ಹೆಚ್ಚಳ ಪ್ರಮಾಣ ಎಷ್ಟಿದೆ ಎಂದರೆ, ಆ ಮೊತ್ತದಲ್ಲಿ ನರೇಗಾ ಯೋಜನೆಯನ್ನು ಹತ್ತು ವರ್ಷಗಳವರೆಗೆ ನಿಭಾಯಿಸಬಹುದು.