ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,419 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,46,56,822ಕ್ಕೆ ಏರಿದೆ. ಇದು ಹಿಂದಿನ ದಿನಕ್ಕಿಂತ ಶೇ 11.6ರಷ್ಟು ಹೆಚ್ಚಾಗಿದೆ ಎಂದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸದ್ಯ ದೇಶದಲ್ಲಿ 94,742 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ನಿನ್ನೆ (ಬುಧವಾರ) 159 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 4,74,111ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 9,525 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ 3,40,89,137 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಒಟ್ಟಾರೆ ಚೇತರಿಕೆ ದರ ಶೇ. 98.36 ರಷ್ಟಿದೆ. ಇದು ಮಾರ್ಚ್ 2020ರಿಂದ ಅತಿ ಹೆಚ್ಚು ಎಂದು ಇಲಾಖೆ ಮಾಹಿತಿ ನೀಡಿದೆ.
ಒಮಿಕ್ರಾನ್ ರೂಪಾಂತರಿ ಹಿಂದಿನ ಕೋವಿಡ್ ರೂಪಾಂತರಿಗಳಿಗಿಂತ ತೀವ್ರ ಸ್ವರೂಪದ ಕಾಯಿಲೆಗೆ ಕಾರಣವಾಗುವುದಿಲ್ಲ. ಲಸಿಕೆ ಪಡೆಯುವುದರಿಂದ ಸೋಂಕು ಅಪಾಯವನ್ನು ತಪ್ಪಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.