ಚೆನ್ನೈ (ತಮಿಳುನಾಡು) : ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಇಂಡಿಯಾ ಮೈತ್ರಿಕೂಟ ಹೋರಾಡುತ್ತದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಚೆನ್ನೈನಲ್ಲಿ ಡಿಎಂಕೆ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಹಕ್ಕು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶದ ಮಹಿಳೆಯರನ್ನು ಪಿತೃಪ್ರಭುತ್ವದ ಚೌಕಟ್ಟಿನಲ್ಲಿ, ಸಾಂಪ್ರದಾಯಿಕ ಸಂಕೇತಗಳಾಗಿ ಬಿಂಬಿಸುವ ಕಾರ್ಯ ಮಾಡುತ್ತಿದೆ ಎಂದು ಟೀಕಿಸಿದರು.
ತಮ್ಮ ಪತಿ ದಿವಂಗತ ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ತಂದರು. ಈ ಮೀಸಲಾತಿಯು ತಳಮಟ್ಟದ ಸರ್ಕಾರಿ ವ್ಯವಸ್ಥೆಯಲ್ಲಿ ಮಹಿಳಾ ನಾಯಕತ್ವಕ್ಕೆ ನಾಂದಿ ಹಾಡಿತು. ಇದು ಇಂದು ಶಾಸಕಾಂಗದಲ್ಲೂ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲು ಪ್ರಮುಖ ಹೆಜ್ಜೆಯಾಯಿತು ಎಂದು ಹೇಳಿದರು.
ನಮ್ಮ ಹೋರಾಟದ ಫಲವಾಗಿ ಇದೀಗ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಲಾಗಿದೆ. ಈ ಮೀಸಲಾತಿ ಅಂಗೀಕಾರಗೊಂಡರೂ ಇನ್ನೂ ಜಾರಿಯಾಗಲು ತುಂಬಾ ಸಮಯ ಹಿಡಿಯುತ್ತದೆ. ಆದರೆ ಮೀಸಲಾತಿಯನ್ನು ಅತಿ ಶೀಘ್ರದಲ್ಲಿ ಅನುಷ್ಠಾನಗೊಳಿಸಲು ಇಂಡಿಯಾ ಒಕ್ಕೂಟ ಹೋರಾಡುತ್ತದೆ ಎಂದು ಭರವಸೆ ನೀಡಿದರು. ಎರಡನೇ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಬಳಿಕ ಲೋಕಸಭೆಯಲ್ಲಿ ಒಮ್ಮತದ ಕೊರತೆಯಿಂದ ಮೀಸಲಾತಿ ಮಸೂದೆ ಅಂಗೀಕಾರವಾಗಲಿಲ್ಲ ಎಂದು ಹೇಳಿದರು.