ನವದೆಹಲಿ:ಭಾರತೀಯ ಸೇನೆ ಮತ್ತು ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ಗಲಭೆಪೀಡಿತ ಮಣಿಪುರ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶ ಕಂಡಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸೋಮವಾರ ಹೇಳಿದರು. 76ನೇ ಸೇನಾ ದಿನದಂದು ಮಾತನಾಡಿದ ಅವರು, ಕೇಂದ್ರ ಸರ್ಕಾರ ಸ್ಥಳೀಯ ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಮಾತುಕತೆ ನಡೆಸಿದೆ. ಕೆಲ ಸಂಘಟನೆಗಳನ್ನು ಶಸ್ತ್ರತ್ಯಾಗ ಮಾಡಿಸಲಾಗಿದೆ. ಇದರಿಂಧ ಈಶಾನ್ಯ ಪ್ರದೇಶದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ ಎಂದರು.
ಈಶಾನ್ಯ ರಾಜ್ಯಗಳಲ್ಲಿ ದಂಗೆಕೋರ ಗುಂಪುಗಳೊಂದಿಗೆ ಶಾಂತಿ ಒಪ್ಪಂದಗಳು ಮತ್ತು ಮಾತುಕತೆಗಳು ನಡೆದಿವೆ. ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಸರ್ಕಾರದ ನೀತಿಗಳು ಪ್ರಮುಖ ಪಾತ್ರವಹಿಸಿವೆ. ಮಣಿಪುರದಲ್ಲಿ ಸರ್ಕಾರದ ಕ್ರಿಯಾಶೀಲತೆ ಮತ್ತು ಭಾರತೀಯ ಸೇನೆಯ ಪ್ರಯತ್ನದಿಂದಾಗಿ ಪರಿಸ್ಥಿತಿ ತಹಬದಿಗೆ ಬಂದಿದೆ. ಸೇನೆ ಕೂಡ ತಾಳ್ಮೆಯಿಂದ ಕೆಲಸ ಮಾಡುವ ಮೂಲಕ ಗಲಭೆಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.
ಭದ್ರತೆ ಮಧ್ಯೆ ಉಗ್ರ ಕೃತ್ಯ ಹೆಚ್ಚಳ:ಉಗ್ರಪೀಡಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಕಳೆದ ಕೆಲವು ತಿಂಗಳಲ್ಲಿ ಹಲವು ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಭದ್ರತಾ ಪಡೆ ಮತ್ತು ಗುಪ್ತಚರ ಪಡೆಗಳ ನೆರವಿನಿಂದ ಭಯೋತ್ಪಾದನೆ ಮಟ್ಟಹಾಕಲು ನಿರಂತರ ಯತ್ನ ನಡೆದಿದೆ. ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮವಿದೆ. ಆದರೆ, ಗಡಿ ಉದ್ದಕ್ಕೂ ಭಯೋತ್ಪಾದನೆ ಪೂರ್ಣವಾಗಿ ನಿಂತಿಲ್ಲ ಎಂಬುದು ಒಳನುಸುಳುವಿಕೆ ಪ್ರಯತ್ನಗಳಿಂದ ತಿಳಿದು ಬರುತ್ತದೆ ಎಂದರು.