ಅಥೆನ್ಸ್(ಗ್ರೀಸ್):ಗ್ರೀಸ್ನಲ್ಲಿ ಒಮಿಕ್ರಾನ್ ತೀವ್ರ ಉಲ್ಬಣಗೊಂಡಿದೆ. ಇದರಿಂದ ಕಂಗೆಟ್ಟಿರುವ ಅಲ್ಲಿನ ಸರ್ಕಾರ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೇ, ಲಸಿಕೆ ಪಡೆಯದವರಿಗೆ ಇನ್ನು ಮುಂದೆ ದಂಡ ವಿಧಿಸಲು ಮುಂದಾಗಿದೆ.
60 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಲಸಿಕೆ ಪಡೆಯುವುದು ಕಡ್ಡಾಯ. ಒಂದು ವೇಳೆ ಲಸಿಕೆ ಪಡೆಯದಿದ್ದರೆ ಅಂಥವರಿಗೆ 50 ಯುರೋ(4232 ರೂಪಾಯಿ) ದಂಡ ಹಾಕಲಾಗುವುದು. ಬಳಿಕವೂ ಲಸಿಕೆ ಪಡೆಯದಿದ್ದರೆ ತಿಂಗಳಿಗೆ 100 ಯುರೋ ದಂಡ ಹಾಕುವ ಬಗ್ಗೆ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.
ಗ್ರೀಸ್ನಲ್ಲಿ ಒಂದು ಕೋಟಿಗೂ ಅಧಿಕ (10.7ಮಿಲಿಯನ್) ಜನಸಂಖ್ಯೆ ಇದ್ದು, ಇದರಲ್ಲಿ ಅರ್ಧದಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಹೀಗಾಗಿ ದೇಶದಲ್ಲಿ ಕೊರೊನಾ ಕೇಸ್ಗಳ ಸಾವಿನ ಪ್ರಮಾಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ವಿಪರೀತವಾಗಿದೆ. ಅದರಲ್ಲೂ ಒಮಿಕ್ರಾನ್ ಸೋಂಕಿತರು ಹೆಚ್ಚಾಗಿದ್ದಾರೆ. ಇದರಿಂದ ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದ್ದು, ಸರ್ಕಾರ ಲಸಿಕೆ ಕಡ್ಡಾಯ ಮತ್ತು ದಂಡದ ಮೊರೆ ಹೋಗಿದೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಥಾನೋಸ್ ಪ್ಲೆವ್ರಿಸ್, ಲಸಿಕೆ ಹಾಕಿಸಿಕೊಳ್ಳದ ಜನರಿಂದ ದಂಡ ವಸೂಲಿ ಮಾಡಿ ಅದನ್ನು ಆಸ್ಪತ್ರೆಗಳ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಲಸಿಕೆ ಕಡ್ಡಾಯ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:15 ದಿನದಲ್ಲಿ 3.5 ಕೋಟಿ ತರುಣರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್: ಕೇಂದ್ರ