ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 5.9 ಮಿಲಿಯನ್ ಟನ್ಗಳಷ್ಟು ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಲಿಥಿಯಂ ಒಂದು ನಾನ್-ಫೆರಸ್ ಲೋಹವಾಗಿದೆ. ಇದು ಎಲೆಕ್ಟ್ರಿಕ್ ವಾಹನ(EV) ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನಾ ಪ್ರದೇಶದಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆಯು ಮೊದಲ ಬಾರಿಗೆ 5.9 ಮಿಲಿಯನ್ ಟನ್‌ಗಳ ಲಿಥಿಯಂ ಸಂಪನ್ಮೂಲಗಳನ್ನು (G3) ಪತ್ತೆ ಹಚ್ಚಿದೆ ಎಂದು ಗಣಿ ಸಚಿವಾಲಯ ತಿಳಿಸಿದೆ.
ಲಿಥಿಯಂ ಮತ್ತು ಚಿನ್ನ ಸೇರಿದಂತೆ ಇತರೆ 51 ಖನಿಜ ನಿಕ್ಷೇಪಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ. ಈ 51 ಖನಿಜ ನಿಕ್ಷೇಪಗಳಲ್ಲಿ, 5 ನಿಕ್ಷೇಪಗಳು ಚಿನ್ನ ಮತ್ತು ಇತರ ನಿಕ್ಷೇಪಗಳು ಪೊಟ್ಯಾಶ್, ಮಾಲಿಬ್ಡಿನಮ್, ಮೂಲ ಲೋಹಗಳು ಮುಂತಾದ ಸರಕುಗಳಿಗೆ ಸಂಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರ (UT), ಆಂಧ್ರಪ್ರದೇಶ, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ 11 ರಾಜ್ಯಗಳಲ್ಲಿ ಹರಡಿವೆ.
ಏಳು ಪ್ರಕಟಣೆ ಬಿಡುಗಡೆ:2018-19 ರಿಂದ ಈವರೆಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ(GSI) ನಡೆಸಿದ ಪರಿಶೋಧನೆಯ ಆಧಾರದ ಮೇಲೆ ನಿಕ್ಷೇಪಗಳನ್ನು ಪತ್ತೆ ಮಾಡಲಾಗಿದೆ. ಇವುಗಳಲ್ಲದೆ, ಒಟ್ಟು 7,897 ಮಿಲಿಯನ್ ಟನ್‌ಗಳ ಸಂಪನ್ಮೂಲ ಹೊಂದಿರುವ ಕಲ್ಲಿದ್ದಲು ಮತ್ತು ಲಿಗ್ನೈಟ್‌ನ 17 ವರದಿಗಳನ್ನು ಸಹ ಕಲ್ಲಿದ್ದಲು ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದೆ. ಜಿಎಸ್‌ಐ ಕಾರ್ಯನಿರ್ವಹಿಸುವ ವಿವಿಧ ವಿಷಯಗಳು ಮತ್ತು ಮಧ್ಯಸ್ಥಿಕೆ ಕ್ಷೇತ್ರಗಳ ಕುರಿತು ಏಳು ಪ್ರಕಟಣೆಗಳನ್ನು ಸಹ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
966 ಕಾರ್ಯಕ್ರಮ: "ಮುಂದಿನ 2023-24 ರ ಪ್ರಸ್ತಾವಿತ ವಾರ್ಷಿಕ ಕಾರ್ಯ ಕ್ರಮವನ್ನು ಸಭೆಯಲ್ಲಿ ಮಂಡಿಸಿ ಚರ್ಚಿಸಲಾಯಿತು. ನಂತರದ ವರ್ಷದಲ್ಲಿ 12 ಸಾಗರ ಖನಿಜ ತನಿಖಾ ಯೋಜನೆಗಳು ಸೇರಿದಂತೆ 318 ಖನಿಜ ಪರಿಶೋಧನಾ ಯೋಜನೆಗಳನ್ನು ಒಳಗೊಂಡಿರುವ 966 ಕಾರ್ಯ ಕ್ರಮಗಳನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ನಡೆಸಲಿದೆ" ಎಂದು ಸಚಿವಾಲಯ ತಿಳಿಸಿದೆ.