ಜೋಧಪುರ (ರಾಜಸ್ಥಾನ): ಭಾರತೀಯ ವಾಯು ಪಡೆಯ ಯುದ್ಧ ವಿಮಾನದ ಮಹಿಳಾ ಪೈಲಟ್ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ದೇಶದ ಹೊರಗೆ ನಡೆಯಲಿರುವ ಯುದ್ಧ ವಿಮಾನಗಳ ಸಮರಾಭ್ಯಾಸದಲ್ಲಿ ಮಹಿಳಾ ಪೈಲಟ್ ಅವ್ನಿ ಚತುರ್ವೇದಿ ಭಾಗವಹಿಸಿದ್ದಾರೆ. ಇದಕ್ಕಾಗಿ ಅವರು ಭಾರತೀಯ ತುಕಡಿಯೊಂದಿಗೆ ನಾಳೆ ಜಪಾನ್‌ಗೆ ತೆರಳಲಿದ್ದಾರೆ. ಸ್ಕ್ವಾಡ್ರನ್ ಲೀಡರ್ ಆಗಿರುವ ಅವ್ನಿ ಚತುರ್ವೇದಿ ಸುಖೋಯ್ 30 ಎಂಕೆಐ (Su-30MKi) ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ.
ಭಾರತದ ಯುದ್ಧ ವಿಮಾನಗಳ ಮೊದಲ ಮಹಿಳಾ ಪೈಲಟ್ಗಳೆಂದು ಅವ್ನಿ ಚತುರ್ವೇದಿ, ಭಾವನಾ ಕಾಂತ್ ಹಾಗೂ ಮೋಹನಾ ಸಿಂಗ್ ಸೇರಿದಂತೆ ಮೂವರು ಖ್ಯಾತರಾಗಿದ್ದಾರೆ. ತವರು ನೆಲದಲ್ಲಿ ನಡೆದ ಯುದ್ಧ ವಿಮಾನಗಳ ಸಮರಾಭ್ಯಾಸದಲ್ಲಿ ಈ ಮಹಿಳಾ ಪೈಲಟ್ಗಳು ಪಾಲ್ಗೊಂಡು ಈಗಾಗಲೇ ತಮ್ಮ ಸಾಮರ್ಥ್ಯ ತೋರಿದ್ದಾರೆ. ಭಾರತಕ್ಕೆ ಬಂದಿದ್ದ ಫ್ರೆಂಚ್ ವಾಯುಪಡೆ ಸೇರಿದಂತೆ ಇತರ ವಿದೇಶಿ ತುಕಡಿಗಳೊಂದಿಗೆ ಅವ್ನಿ ಚತುರ್ವೇದಿ ಮತ್ತು ಭಾವನಾ ಕಾಂತ್ ಭಾಗವಹಿಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ:ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್ ಈ ಸಾನಿಯಾ ಮಿರ್ಜಾ..
ಭಾರತ ಮತ್ತು ಜಪಾನ್ನ ಜಂಟಿ ವೀರ್ ಗಾರ್ಡಿಯನ್ - 2023 ಸಮರಾಭ್ಯಾಸವು ಜಪಾನ್ನಲ್ಲಿ ಜನವರಿ 12ರಿಂದ 26ರವರೆಗೆ ನಡೆಯಲಿದೆ. ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್ ಮತ್ತು ಭಾರತೀಯ ವಾಯು ಪಡೆಯ ತುಕಡಿಗಳು ಇದರಲ್ಲಿ ಭಾಗವಹಿಸಲಿವೆ. ಒಮಿಟಮಾದಲ್ಲಿನ ಹೈಕುರಿ ಮತ್ತು ಅದರ ಸುತ್ತಮುತ್ತಲಿನ ವಾಯು ನೆಲೆ ಮತ್ತು ಸಯಾಮಾದಲ್ಲಿರುವ ಇರುಮಾ ವಾಯು ನೆಲೆಯಲ್ಲಿ ಈ ಸಮರಾಭ್ಯಾಸ ನಡೆಯಲಿದೆ. ಭಾರತದ ನಾಲ್ಕು ಸು-30 ಎಂಕೆಐ, ಎರಡು ಸಿ-17 ಗ್ಲೋಬ್‌ಮಾಸ್ಟರ್‌ಗಳು ಮತ್ತು ಐಎಲ್ 8 ಟ್ಯಾಂಕರ್ ಯುದ್ಧ ವಿಮಾನಗಳು ಭಾಗವಹಿಸುತ್ತಿದ್ದು, ಸು-30 ಎಂಕೆಐ ಯುದ್ಧ ವಿಮಾನದ ಪೈಲಟ್ ಅವ್ನಿ ಚತುರ್ವೇದಿ ಪಾಲ್ಗೊಳ್ಳಲಿದ್ದಾರೆ.