ನವದೆಹಲಿ:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥರಾದ ಡಾ.ಉಮರ್ ಅಹ್ಮದ್ ಇಲ್ಯಾಸಿ ಅವರು ಭಾಗವತ್ರನ್ನು "ರಾಷ್ಟ್ರದ ಪಿತಾಮಹ" ಎಂದು ಬಣ್ಣಿಸಿದ್ದಾರೆ.
ದೆಹಲಿಯಲ್ಲಿ ಡಾ.ಇಲ್ಯಾಸಿ ಸೇರಿದಂತೆ ಹಲವು ಮುಸ್ಲಿಂ ಬುದ್ಧಿಜೀವಿಗಳನ್ನು ಆರ್‌ಎಸ್‌ಎಸ್ ಮುಖ್ಯಸ್ಥರು ಭೇಟಿ ಮಾಡಿದರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಾ.ಇಲ್ಯಾಸಿ ಅವರು, "ನನ್ನ ಆಹ್ವಾನದ ಮೇರೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭೇಟಿ ಮಾಡಿದರು. ಅವರು ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಇದ್ದಂತೆ. ಅವರ ಭೇಟಿಯಿಂದ ಉತ್ತಮ ಸಂದೇಶ ಹೊರ ಬಂದಿದೆ" ಎಂದು ಅವರು ಹೇಳಿದರು.
"ನಾವು ದೇವರನ್ನು ಆರಾಧಿಸುವ ವಿಧಾನಗಳು ವಿಭಿನ್ನವಾಗಿರಬಹುದು. ಆದರೆ ಧರ್ಮವೆಂದರೆ ಮಾನವೀಯತೆ. ಅದರ ನಂತರ ಎಲ್ಲವೂ. ಧರ್ಮಗಳು ಯಾವುದೇ ಇದ್ದರೂ ದೇಶ ಮೊದಲು ಎಂಬುದು ನಮ್ಮೆಲ್ಲರ ನಂಬಿಕೆ" ಎಂದು ಉಮರ್ ಅಹ್ಮದ್ ಇಲ್ಯಾಸಿ ಅವರು ಹೇಳಿದರು.