ಮುಂಬೈ (ಮಹಾರಾಷ್ಟ್ರ): ರಾಷ್ಟ್ರ ರಾಜಧಾನಿ ದೆಹಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಲು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಸುಗ್ರೀವಾಜ್ಞೆಯನ್ನು ರಾಜ್ಯಸಭೆಯಲ್ಲಿ ವಿರೋಧಿಸಲು ಪ್ರತಿಪಕ್ಷಗಳ ನಾಯಕರ ಬೆಂಬಲವನ್ನು ಕೇಜ್ರಿವಾಲ್ ಕೇಳುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಗುರುವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಸಹಕಾರ ಕೋರಿದರು.
ಹಿರಿಯ ರಾಜಕಾರಣಿ ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆಸಲು ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್, ರಾಘವ್ ಚಡ್ಡಾ ಹಾಗೂ ದೆಹಲಿ ಸಚಿವೆ ಅತಿಶಿ ಅವರೊಂದಿಗೆ ಮಹಾರಾಷ್ಟ್ರ ರಾಜಧಾನಿ ಮುಂಬೈಗೆ ಆಗಮಿಸಿದರು. ಶರದ್ ಪವಾರ್ ಸೇರಿ ಎನ್‌ಸಿಪಿ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.
ಇಡೀ ದೇಶಕ್ಕೆ ಒಂದು ಸಂದೇಶ ರವಾನೆ:ನಂತರ ಶರದ್ ಪವಾರ್ ಅವರೊಂದಿಗೆ ಅರವಿಂದ್ ಕೇಜ್ರಿವಾಲ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯಸಭೆಯಲ್ಲಿ ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ರಚನೆ ಕುರಿತು ಸುಗ್ರೀವಾಜ್ಞೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಅಂಗೀಕಾರ ಮಾಡಿಕೊಳ್ಳಲು ವಿಫಲವಾದರೆ ಇಡೀ ದೇಶಕ್ಕೆ ಒಂದು ಸಂದೇಶ ರವಾನೆಯಾಗಲಿದೆ. 2024ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಸರ್ಕಾರವು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಇದು ಸೂಚಿಸುತ್ತದೆ ಎಂದು ಕೇಜ್ರಿವಾಲ್ ಹೇಳಿದರು.
ರಾಜ್ಯಸಭೆಯಲ್ಲಿ ಮಸೂದೆ ಸೋಲಿಸಲು ಎನ್‌ಸಿಪಿ ನಮಗೆ ಬೆಂಬಲ ನೀಡುತ್ತದೆ ಎಂದು ಶರದ್ ಪವಾರ್ ನಮಗೆ ಭರವಸೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣಕ್ಕೆ ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ನಾವು ಎಲ್ಲ ಬಿಜೆಪಿಯೇತರ ಪಕ್ಷಗಳಿಂದ ಬೆಂಬಲವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ. ಮೇಲ್ಮನೆಯಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿರುವುದಕ್ಕಾಗಿ ಪವಾರ್ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ದೆಹಲಿ ಸಿಎಂ ತಿಳಿಸಿದರು.