ಜೈಪುರ (ರಾಜಸ್ಥಾನ):ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ರಾಜಸ್ಥಾನದಲ್ಲಿ ನಡೆದ ಭ್ರಷ್ಟಾಚಾರ ಆರೋಪದ ಪ್ರಕರಣಗಳ ತನಿಖೆಗೆ ಒತ್ತಾಯಿಸಿ ಸಿಎಂ ಅಶೋಕ್ ಗೆಹ್ಲೋಟ್‌ಗೆ ಪತ್ರ ಬರೆದಿದ್ದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ತಿಳಿಸಿದ್ದಾರೆ.
ಭಾನುವಾರ ಇಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೈಲಟ್, ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಅಧಿಕಾರಾವಧಿಯಲ್ಲಿ ನಾವು (ಕಾಂಗ್ರೆಸ್) ಬಿಜೆಪಿಯ ನೀತಿಗಳ ಬಗ್ಗೆ ಸರ್ಕಾರದ ವಿರುದ್ಧ ಟೀಕಾಸಮರ ನಡೆಸಿದ್ದೇವೆ. ಅವರ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆದಿದ್ದೇವೆ ಎಂದರು.
ನಾವು ಜವಾಬ್ದಾರಿಯುತ ಪ್ರತಿಪಕ್ಷದ ಪಾತ್ರ ನಿರ್ವಹಿಸಿದ್ದೇವೆ ಮತ್ತು ಮುಂಚೂಣಿಗೆ ಬಂದ ಪ್ರತಿಯೊಂದು ಭ್ರಷ್ಟಾಚಾರ ಸಂಬಂಧಿತ ವಿಷಯವನ್ನು ಎತ್ತಿ ತೋರಿಸಿದ್ದೇವೆ. ಸಾರ್ವಜನಿಕರೂ ನಮ್ಮೊಂದಿಗೆ ಪ್ರತಿಧ್ವನಿಸಿದರು. ಇದರ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದು ಹೇಳಿದರು.
ನಾವು ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದ ಪ್ರತಿಯೊಂದು ಆರೋಪದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ನಾವು ಜನರಿಗೆ ಭರವಸೆ ನೀಡಿದ್ದೆವು. ನಾನು ಸೇಡಿನ ಭಾವನೆ ಅಥವಾ ದ್ವೇಷದಿಂದ ತನಿಖೆ ನಡೆಸಲು ಎಂದಿಗೂ ಮುಂದಾಗಿಲ್ಲ. ಆದರೆ, ಭ್ರಷ್ಟಾಚಾರ ನಡೆದಿರುವುದು ಸತ್ಯವೂ ಆಗಿದೆ. ನಾವು ನಮ್ಮ ಭರವಸೆಗಳನ್ನು ಈಡೇರಿಸಿದರೆ ಮಾತ್ರ ಪ್ರತಿಪಕ್ಷವಾಗಿ ನಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬಹುದು ಎಂದು ಅವರು ಹೇಳಿದರು.