ಶ್ರೀನಗರ( ಜಮ್ಮು ಮತ್ತು ಕಾಶ್ಮೀರ):ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿ ಇಂದಿಗೆ 4 ವರ್ಷ ಪೂರ್ಣಗೊಂಡಿದೆ. ಈ ವರ್ಷಾಚರಣೆಯನ್ನು ಕೇಂದ್ರ ಸರ್ಕಾರ, ಭಾರತೀಯ ಜನತಾ ಪಕ್ಷ ಮತ್ತು ಕೆಲವು ಗುಂಪುಗಳು ಆಚರಿಸುತ್ತಿವೆ. ಆದರೆ ಮತ್ತೊಂದೆಡೆ ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತದ ವಿರುದ್ಧ ಪ್ರತಿಪಕ್ಷಗಳು ಸಿಡಿದೆದ್ದಿವೆ.
ನಾವೆಲ್ಲ ಗೃಹ ಬಂಧನದಲ್ಲಿದ್ದೇವೆ- ಮುಫ್ತಿ: ಇತರ ಹಿರಿಯ ಪಿಡಿಪಿ ನಾಯಕರೊಂದಿಗೆ ನನ್ನನ್ನು ಇಂದು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿ ( ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ)ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡುವ ಮೂಲಕ ಹೇಳಿದ್ದಾರೆ.
ಮಧ್ಯರಾತ್ರಿಯ ನಂತರ ನನ್ನ ಪಕ್ಷದ ಹಲವಾರು ಕಾರ್ಯಕರ್ತರನ್ನು ಪೊಲೀಸ್ ಠಾಣೆಗಳಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಎಂದಿನಂತೆ ಯಾವುದೇ ಸಮಸ್ಯೆಯಿಲ್ಲದೇ ಸಹಜವಾಗಿಯೇ ಇದೆ ಎಂದು ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಆದರೆ ಇದು ನಿಜವಲ್ಲ. ನಮ್ಮ ಆರೋಪಕ್ಕೆ ಪುಷ್ಟಿ ನೀಡುವಂತೆ, ಇಂದು ನಡೆದ ಘಟನೆ ಎಲ್ಲವನ್ನು ಬಹಿರಂಗ ಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ.
ಇನ್ನು ಶ್ರೀನಗರದಾದ್ಯಂತ 370 ನೇ ವಿಧಿಯ ರದ್ದುಗೊಳಿಸಿದ ವರ್ಷಾಚರಣೆಯನ್ನು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ದಿನವನ್ನು'ಆಚರಿಸಲು' ಕಾಶ್ಮೀರಿಗಳಿಗೆ ಕರೆ ನೀಡಿರುವ ಅಲ್ಲಿನ ಆಡಳಿತ, ಬೃಹತ್ ಫಲಕ, ಬ್ಯಾನರ್ಗಳನ್ನು ಹಾಕಿದೆ. ಈ ಬಗ್ಗೆ ಮಾಜಿ ಸಿಎಂ ಮೆಹಬೂಬಾ ಮುಪ್ತಿ ಕಿಡಿಕಾರಿದ್ದಾರೆ. ’’ಜನರ ನಿಜವಾದ ಭಾವನೆಯನ್ನು ಉಸಿರುಗಟ್ಟಿಸಲು ಇಲ್ಲಿ ವಿವೇಚನಾರಹಿತ ಶಕ್ತಿಯನ್ನು ಬಳಸಲಾಗುತ್ತಿದೆ. ಆರ್ಟಿಕಲ್ 370 ಗೆ ಸಂಬಂಧಿಸಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಈ ಬೆಳವಣಿಗೆಗಳ ಕುರಿತಾದ ಮಾಹಿತಿಯನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ‘‘ ಎಂದಿದ್ದಾರೆ.
ಸರ್ಕಾರದ ಆಚರಣೆ ವಿರೋಧಿ ಪಿಡಿಪಿ ನಡೆಸುತ್ತಿರುವ ಹೋರಾಟ, ಜನರಲ್ಲಿ ಅರಿವು ಮೂಡಿಸಲು ಸೆಮಿನಾರ್ ಅಥವಾ ಚರ್ಚೆ ನಡೆಸಲು ಅನುಮತಿ ಕೇಳಿದ್ದೆವು. ಆದರೆ ನಮ್ಮ ಮನವಿಯನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಅನುಮತಿ ನಿರಾಕರಿಸಿದ್ದು, ನಮ್ಮೆಲ್ಲ ಸೆಮಿನಾರ್ಗಳನ್ನು ರದ್ದುಗೊಳಿಸಿದೆ ಎಂದು ಮೆಹಬೂಬಾ ಮುಪ್ತಿ ಆರೋಪಿಸಿದ್ದಾರೆ. ಮತ್ತೊಂದೆಡೆ ಆರ್ಟಿಕಲ್ 370 ರದ್ದಾದ ಬಳಿಕ ಪ್ರತಿಪಕ್ಷಗಳು ಈ ನಿರ್ಧಾರದ ವಿರುದ್ಧ ಹೋರಾಟ ನಡೆಸಿವೆ.
ಇದನ್ನೂ ಓದಿ:''ಸಂವಿಧಾನದ 370ನೇ ವಿಧಿಯು ಶಾಶ್ವತ ಲಕ್ಷಣವನ್ನು ಪಡೆದುಕೊಂಡಿದೆಯೇ ಎಂಬುದು ಚರ್ಚಾಸ್ಪದವಾಗಿದೆ'': ಕಪಿಲ್ ಸಿಬಲ್‌ಗೆ ತಿಳಿಸಿದ ಸುಪ್ರೀಂ ಕೋರ್ಟ್..