ಚೆನ್ನೈ(ತಮಿಳುನಾಡು): ಕರ್ನಾಟಕದ ಮೈಸೂರಿನ ವ್ಯಾಸಪುರಂನ ವಾಸುದೇವನ್ (83) ಅವರು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಹೋದರ ಎಂದು ಹೇಳಿಕೊಂಡು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಯಲಲಿತಾ ಅವರ ತಂದೆ ಆರ್. ಜಯರಾಮ್. ಜಯರಾಮ್ ನನ್ನ ತಂದೆಯೂ ಹೌದು. ಜಯರಾಮ್ ಅವರ ಮೊದಲ ಪತ್ನಿ ಜೆ. ಜಯಮ್ಮ ಅವರಿಗೆ ನಾನು ಒಬ್ಬನೇ ಮಗ ಮತ್ತು ನಾನು ಅವರ ಏಕೈಕ ವಾರಸುದಾರ ಎಂದಿದ್ದಾರೆ.
ಜಯರಾಮ್ ಅವರು ವೇದವಲ್ಲಿ ಅಲಿಯಾಸ್ ವೇದಮ್ಮ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಜಯಕುಮಾರ್ ಮತ್ತು ಜಯಲಲಿತಾ ಅವರ ಮಕ್ಕಳು. ಈ ಮೂಲಕ ಜಯಲಲಿತಾ ಮತ್ತು ಜಯಕುಮಾರ್ ನನ್ನ ಸಹೋದರ ಮತ್ತು ಸಹೋದರಿಯರು ಎಂದು ವಿವರಿಸಿದ್ದಾರೆ.
1950ರಲ್ಲಿ ನನ್ನ ತಾಯಿ ಜಯಮ್ಮ ಮೈಸೂರು ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಮೊಕದ್ದಮೆ ಹೂಡಿದಾಗ ಆ ಪ್ರಕರಣದಲ್ಲಿ ನನ್ನ ತಂದೆಯ ಎರಡನೇ ಪತ್ನಿ ವೇದವಲ್ಲಿ, ಜಯಕುಮಾರ್ ಮತ್ತು ಜಯಲಲಿತಾ ಅವರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿತ್ತು. ನಂತರ ಪ್ರಕರಣ ಇತ್ಯರ್ಥದಲ್ಲಿ ಅಂತ್ಯಗೊಂಡಿತು. ಜಯಕುಮಾರ್ ಅವರು ಜಯಲಲಿತಾ ಅವರಿಗಿಂತ ಮುಂಚೆಯೇ ನಿಧನರಾದರು. ಹಾಗಾಗಿ ಇಂದು ನಾನು ಸಹೋದರನಾಗಿ ಜಯಲಲಿತಾ ಅವರ ನೇರ ಉತ್ತರಾಧಿಕಾರಿ. ಹಾಗಾಗಿ ಜಯಲಲಿತಾ ಅವರ ಆಸ್ತಿಯಲ್ಲಿ ಶೇ 50ರಷ್ಟು ನನಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.