ಭುವನೇಶ್ವರ(ಒಡಿಶಾ):ಪುರಿ ಜಗನ್ನಾಥ ದೇವಸ್ಥಾನಕ್ಕೆ ತಾವು ಭೇಟಿ ನೀಡಿದ ವಿಚಾರ ತೀವ್ರ ವಿವಾದಕ್ಕೆ ಕಾರಣವಾದ ನಂತರ ಈ ಬಗ್ಗೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕಾಮಿಯಾ ಜಾನಿ ಸ್ಪಷ್ಟೀಕರಣ ನೀಡಿದ್ದಾರೆ. ತಾನೊಬ್ಬ ಹಿಂದೂ ಧರ್ಮ ಪರಿಪಾಲಕಿಯಾಗಿದ್ದು, ಯಾವತ್ತೂ ಗೋಮಾಂಸ ತಿಂದಿಲ್ಲ ಅಥವಾ ಅದನ್ನು ಅನುಮೋದಿಸಿಲ್ಲ ಎಂದು ಅವರು ಭಾನುವಾರ ತಿಳಿಸಿದ್ದಾರೆ.
ಕರ್ಲಿ ಟೇಲ್ಸ್ ಸಂಸ್ಥಾಪಕಿ ಮತ್ತು ಫುಡ್ ಬ್ಲಾಗರ್ ಜಾನಿ ತಮ್ಮ ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ನಲ್ಲಿ ಈ ಬಗ್ಗೆ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕ್ಷಮೆಯಾಚಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದ ಮತ್ತು ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾಮಾಜಿಕ ಸಂಘಟನೆಗಳು ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದ ಒಂದು ದಿನದ ನಂತರ ಕಾಮಿಯಾ ಈ ಸ್ಪಷ್ಟನೆ ನೀಡಿದ್ದಾರೆ.
ವೀಡಿಯೊ ಸಂದೇಶದಲ್ಲಿ ಜಾನಿ, "ಪುರಿಯ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಹಿಂದಿನ ನನ್ನ ಉದ್ದೇಶವು ದೇವರ ಆಶೀರ್ವಾದ ಪಡೆಯುವುದು ಮತ್ತು ದೇವಾಲಯದ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಜನರಿಗೆ ತಿಳಿಸುವುದು ಮಾತ್ರ ಆಗಿತ್ತು. ಆದರೆ ನನ್ನ ಭೇಟಿ ವಿವಾದಾತ್ಮಕವಾಗಿರುವುದು ದುರದೃಷ್ಟಕರ" ಎಂದು ಹೇಳಿದ್ದಾರೆ.
ದೇವಾಲಯದ ಆಡಳಿತ ಮಂಡಳಿಯ ನಿಯಮಗಳ ಬಗ್ಗೆ ತಮಗೆ ಅರಿವಿರುವುದಾಗಿ ಹೇಳಿದ ಅವರು, "ನಾನು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಹಿಂದೂ ಧರ್ಮ ಪರಿಪಾಲಕಿ. ನಾನು ಗೋಮಾಂಸ ಸೇವಿಸಿಲ್ಲ ಅಥವಾ ಅದನ್ನು ಪ್ರಚಾರ ಮಾಡಿಲ್ಲ." ಎಂದಿದ್ದಾರೆ.
ಫುಡ್ ಬ್ಲಾಗರ್ ಆಗಿ ವಿವಿಧ ಸ್ಥಳಗಳ ಸ್ಥಳೀಯ ಆಹಾರ ಪದ್ಧತಿಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದೇನೆ ಮತ್ತು ಆ ವೀಡಿಯೊ ಕೇರಳದ್ದಾಗಿದೆ. ಈಗ ಅದರ ಸ್ಕ್ರೀನ್ಶಾಟ್ಗಳನ್ನು ಶೇರ್ ಮಾಡಲಾಗುತ್ತಿದೆ ಎಂದು ಜಾನಿ ಹೇಳಿದರು. "ತಪ್ಪು ತಿಳುವಳಿಕೆಯಿಂದ ವಿವಾದ ಉಂಟಾಗಿರಬಹುದು. ಈ ಸ್ಪಷ್ಟೀಕರಣವು ತಪ್ಪು ತಿಳುವಳಿಕೆಯನ್ನು ಕೊನೆಗೊಳಿಸುತ್ತದೆ" ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಪ್ರತಿಪಕ್ಷ ಬಿಜೆಪಿ ಕೂಡ ಈ ಬಗ್ಗೆ ತೀಕ್ಷ್ಣವಾಗಿ ಖಂಡಿಸಿದ್ದು, ಜಾನಿ ಮತ್ತು ಅವರಿಗೆ ದೇವಸ್ಥಾನದೊಳಗೆ ಬರಲು ಅವಕಾಶ ಮಾಡಿಕೊಟ್ಟ ಬಿಜೆಡಿ ನಾಯಕ ವಿ.ಕೆ.ಪಾಂಡಿಯನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಈ ಹಿಂದೆ ಬಿಜೆಪಿ ಜಾನಿ ಅವರನ್ನು ಗೋಮಾಂಸ ಭಕ್ಷಕಿ ಮತ್ತು ಗೋಮಾಂಸ ಸೇವನೆಯ ಪ್ರಚಾರಕಿ ಎಂದು ಬಿಂಬಿಸಿತ್ತು. ಕಟ್ಟುನಿಟ್ಟಾಗಿ ಹಿಂದೂಗಳಿಗೆ ಮಾತ್ರ ಪ್ರವೇಶ ಇರುವ 12 ನೇ ಶತಮಾನದ ದೇವಾಲಯಕ್ಕೆ ಪ್ರವೇಶಿಸಲು ಅವರಿಗೆ ಹೇಗೆ ಅವಕಾಶ ನೀಡಲಾಯಿತು ಎಂದು ಕೇಸರಿ ಪಕ್ಷ ಪ್ರಶ್ನೆಗಳನ್ನು ಎತ್ತಿದೆ. ದೇವಾಲಯಕ್ಕೆ ಭೇಟಿ ನೀಡಲು ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಜಾನಿ ಮತ್ತು 5 ಟಿ (ಪರಿವರ್ತನೆ ಉಪಕ್ರಮ) ಅಧ್ಯಕ್ಷ ವಿ.ಕೆ.ಪಾಂಡಿಯನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಕ್ಷ ಒತ್ತಾಯಿಸಿದೆ.
ಮತ್ತೊಂದೆಡೆ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಜಾನಿಯನ್ನು ತೊಡಗಿಸಿಕೊಳ್ಳುವ ಮೂಲಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿರುವಾಗ ಜಾನಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುವುದನ್ನು ಬಿಜೆಪಿ ಹೇಗೆ ಆಕ್ಷೇಪಿಸುತ್ತದೆ ಎಂದು ಬಿಜೆಡಿ ಸಂಸದ ಮಾನಸ್ ಮಂಗರಾಜ್ ಬಿಜೆಪಿಗೆ ಪ್ರಶ್ನಿಸಿದ್ದಾರೆ. "ಹಿಂದೂ ಪರಂಪರೆ ಮತ್ತು ದೇವಾಲಯಗಳ ಬಗ್ಗೆ ಚಲನಚಿತ್ರಗಳನ್ನು ನಿರ್ಮಿಸಲು ಬಿಜೆಪಿ ಸರ್ಕಾರ ಕಾಮಿಯಾ ಜಾನಿಯನ್ನು ನೇಮಿಸಿತ್ತು. ಕಾಮಿಯಾ ಚಾರ್ಧಾಮ್ ಮತ್ತು ಆಯೋಧ್ಯೆಗೂ ಹೋಗಿದ್ದರು. ಅದಕ್ಕಾಗಿ ಮಾತ್ರ ನೀವು ಆಕೆಯನ್ನು ಮೆಚ್ಚಿಕೊಳ್ಳುತ್ತೀರಿ" ಎಂದು ಮಂಗರಾಜ್ ಹೇಳಿದ್ದಾರೆ.
ಇದನ್ನೂ ಓದಿ: 'ಹಿಂದಿ ಮಾತನಾಡುವವರಿಗೆ ತಮಿಳುನಾಡಿನಲ್ಲಿ ರಸ್ತೆ, ಶೌಚಾಲಯ ಸ್ವಚ್ಛತೆಯ ಕೆಲಸ': ಡಿಎಂಕೆ ಸಂಸದ ಮಾರನ್ ಹೇಳಿಕೆ ವಿವಾದ