ಹೈದರಾಬಾದ್: ಡೆಲ್ಲಿಯಲ್ಲಿ ಕುಳಿತು ಅಮಾಯಕರು, ಉದ್ಯೋಗಾಕಾಂಕ್ಷಿಗಳನ್ನ ಗುರಿ ಮಾಡಿ ಬಹುಮಾನ, ಉದ್ಯೋಗದ ಹೆಸರಿನ ಆಸೆ ತೋರಿಸಿ ವಂಚನೆ ಮಾಡುತ್ತಿದ್ದ 8 ಮಂದಿಯನ್ನು ಹೈದರಾಬಾದ್ ಸಿಟಿ ಸೈಬರ್ ಕ್ರೈಮ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿಯ ಮಯೂರ್ ವಿಹಾರ್ನಲ್ಲಿದ್ದ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ 8 ಮಂದಿ ವಂಚಕರನ್ನು ಬಂಧಿಸಲಾಗಿದೆ. ರಾಜೇಶ್ ಸಿಂಗ್ ಅಲಿಯಾನ್ ಚಂದನ್, ಅನುಭ್ ಸಿಂಗ್, ನಫೀಜ್ ಸೈಫಾಲಿ ಅಲಿಯಾಸ್ ನೇಹಾ ಸಿಂಗ್, ಯೋಗಿತಾ ಅಲಿಯಾಸ್ ಪೂಜಾ ಕುಮಾರಿ, ಶಾಲು ಕುಮಾರಿ ಅಲಿಯಾಸ್ ರಾಧಿಕಾ ರೈ, ಪ್ರಿಯಾ ಅಲಿಯಾಸ್ ನೇಹಾ ಕುಮಾರಿ ಮತ್ತು ಶಿವಾನಿ ಅಲಿಯಾಸ್ ನಂದಿನಿ ಅಗರ್ವಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಮುಗ್ದರಿಗೆ ಮೋಸ ಮಾಡಿ ಹಣಗಳಿಸುವ ಉದ್ದೇಶದಿಂದ ಈ ಎಲ್ಲಾ 8 ಆರೋಪಿಗಳು ದೆಹಲಿಯ ಮಯೂರ್ ವಿಹಾರ್ನಲ್ಲಿ ಕಾಲ್ ಸೆಂಟರ್ ಆರಂಭಿಸಿದ್ದರು. ವಿವಿಧ ಉದ್ಯೋಗ ವೆಬ್ಸೈಟ್ಗಳಲ್ಲಿಉದ್ಯೋಗ ಆಕಾಂಕ್ಷಿಗಳ ವಿವರ ತೆಗೆದುಕೊಂಡು ಕರೆ ಮಾಡಿ ಉದ್ಯೋಗದ ಆಸೆ ತೋರಿಸಿ, ಪ್ರೊಸೆಸಿಂಗ್ ಫೀಜ್ ಎಂದು ಹಣವನ್ನು ಪಡೆಯುತ್ತಿದ್ದರು. ಮೊಬೈಲ್ ಮತ್ತು ಇಮೇಲ್ ಮೂಲಕ ಸಂಪರ್ಕಿಸಿ ಉದ್ಯೋಗದ ಆಸೆ ತೋರಿಸಿ ವಂಚನೆ ಮಾಡುತ್ತಿದ್ದರು ಎಂದು ಹೈದರಾಬಾದ್ ಜಂಟಿ ಪೊಲೀಸ್ ಆಯುಕ್ತ ಗಜರಾವ್ ಭೂಪಾಲ್ ತಿಳಿಸಿದ್ದಾರೆ.