ರಾಂಪುರ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಮೊದಲ ಹೈಡಾಟಿಡ್ ಸಿಸ್ಟ್ ಕಾಯಿಲೆ ವರದಿಯಾಗಿದೆ. ಇಲ್ಲಿನ ರಾಂಪುರ ಮಹಾತ್ಮ ಗಾಂಧಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಗರ್ಭಕೋಶದಲ್ಲಿ ಹೈಡಾಟಿಡ್ ಸಿಸ್ಟ್ ಕಾಯಿಲೆ ಪತ್ತೆಯಾಗಿದೆ.
ಶ್ವಾಸಕೋಶಗಳು, ಯಕೃತ್ತು, ಮೆದುಳು ಮತ್ತು ಮೂಳೆಗಳಲ್ಲಿ ಹೈಡಾಟಿಡ್ ಸಿಸ್ಟ್ ಹೆಚ್ಚಾಗಿ ಕಂಡು ಬರುತ್ತದೆ. ಆದರೆ, ಗರ್ಭಕೋಶದಲ್ಲಿ ಹೈಡಾಟಿಡ್ ಸಿಸ್ಟ್ ಪತ್ತೆಯಾಗಿರುವುದು ದೇಶದಲ್ಲೇ ಅಪರೂಪವಾದ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:ಹತ್ತರಲ್ಲಿ ಏಳುಮಂದಿಗೆ ಕಾಡುತ್ತಂತೆ ಕೂದಲು ಉದುರುವ ಸಮಸ್ಯೆ : ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆ ಏನು?
42 ವರ್ಷದ ಮಹಿಳೆಗೆ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಹೈಡಾಟಿಡ್ ಸಿಸ್ಟ್ ಕಾಯಿಲೆ ಇರುವ ಬಗ್ಗೆ ಖಾನೇರಿ ಸ್ತ್ರೀರೋಗತಜ್ಞರು ಶಂಕೆ ವ್ಯಕ್ತಪಡಿಸಿದ್ದರು. ಆ ನಂತರ ತಜ್ಞ ವೈದ್ಯರ ತಂಡ ಆಳವಾದ ಅಧ್ಯಯನ ನಡೆಸಿ ನಂತರ ಅದರ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ಈ ಬಗ್ಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ.ಸಂಜಯ್ ಮಾತನಾಡಿ, ಈ ಹೈಡಾಟಿಡ್ ಕಾಯಿಲೆ ಮೂಲತಃ ನಾಯಿ, ಕುರಿ ಮತ್ತು ಮೇಕೆಗಳಲ್ಲಿ ಕಂಡುಬರುತ್ತದೆ. ಆದರೆ, ಮಾನವರಲ್ಲಿ ಇಂತಹ ಪ್ರಕರಣಗಳು ಕಂಡು ಬರುವುದು ಅಪರೂಪ. ಇದು ಮುಖ್ಯವಾಗಿ ಹೊಟ್ಟೆ, ಶ್ವಾಸಕೋಶ, ಮೆದುಳು ಅಥವಾ ಮೂಳೆಗಳಲ್ಲಿ ಕಂಡು ಬರುತ್ತದೆ. ದೇಶದಲ್ಲಿ ಇಂತಹ ಕೆಲವೇ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಹಿಮಾಚಲ ಪ್ರದೇಶದಲ್ಲಿ ಇಂತಹ ಪ್ರಕರಣ ಇದುವರೆಗೂ ಕಂಡು ಬಂದಿಲ್ಲ ಎಂದು ತಿಳಿಸಿದರು.
ಹೈಡಾಟಿಡ್ ಸಿಸ್ಟ್ ಎಂದರೇನು?: ಹೈಡಾಟಿಡ್ ಸಿಸ್ಟ್ ಎನ್ನುವುದು ವಿಶೇಷ ರೀತಿಯ ಹುಳುಗಳ ಮೊಟ್ಟೆಯಾಗಿದ್ದು, ಅದು ಚಿಪ್ಪಿನಿಂದ ಮುಚ್ಚಲ್ಪಟ್ಟಿದೆ. ಈ ಮೊಟ್ಟೆಯು ದೇಹದ ಭಾಗವನ್ನು ತಲುಪಿದಾಗ ಅದು ಕ್ರಮೇಣ ದೊಡ್ಡದಾಗುತ್ತದೆ. ಇದು ಹೆಚ್ಚಾಗಿ ಶ್ವಾಸಕೋಶ ಮತ್ತು ಯಕೃತ್ತಿನಲ್ಲಿ ಕಂಡು ಬರುತ್ತದೆ.
ಹೈಡಾಟಿಡ್ ಕಾಯಿಲೆಯನ್ನು ಹೈಡಾಟಿಡೋಸಿಸ್ ಅಥವಾ ಎಕಿನೊಕೊಕೊಸಿಸ್ ಎಂದೂ ಕರೆಯಲಾಗುತ್ತದೆ. ಇದು ನಿರ್ದಿಷ್ಟ ಪರಾವಲಂಬಿಯಿಂದ ಉಂಟಾಗುವ ಗಂಭೀರವಾದ ಸೋಂಕಾಗಿದ್ದು, ಇದು ರೋಗಿಯ ಜೀವಕ್ಕೆ ಮಾರಕವಾಗಬಹುದು.
ಹೈಡಾಟಿಡ್ ಕಾಯಿಲೆ ಏಕೆ ಸಂಭವಿಸುತ್ತದೆ?: ಹೈಡಾಟಿಡ್ ಕಾಯಿಲೆಯು ಎಕಿನೊಕೊಕಸ್ನ ಟೇಪ್ ವರ್ಮ್‌ನಿಂದ ಉಂಟಾಗುವ ಪರಾವಲಂಬಿ ಸೋಂಕು. ಇದು ಹಾನಿಕಾರಕ ರೋಗಕಾರಕ ಪರಾವಲಂಬಿಯಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ನಾಯಿಗಳ ಮಲದೊಂದಿಗೆ ಸಂಪರ್ಕಕ್ಕೆ ಬರುವ ಮೂಲಕ ಮಾನವರಲ್ಲೂ ಈ ಕಾಯಿಲೆ ಸಂಭವಿಸುತ್ತದೆ.
ಏಕೆಂದರೆ ನಾಯಿಗಳ ಮಲದಲ್ಲಿ ಟೇಪ್ ವರ್ಮ್ ಮೊಟ್ಟೆಗಳು ಇರುತ್ತವೆ. ಈ ಟೇಪ್ ವರ್ಮ್ ಮೊಟ್ಟೆಗಳು ಸೋಂಕಿತ ನಾಯಿಗಳ ಬಾಲ ಮತ್ತು ಗುದದ್ವಾರದ ಸುತ್ತ ಕೂದಲಿಗೆ ಅಂಟಿಕೊಳ್ಳುತ್ತವೆ ಮತ್ತು ಅವುಗಳನ್ನು ಎತ್ತುವ ಅಥವಾ ಸ್ಪರ್ಶಿಸುವ ಮೂಲಕ ಹರಡುತ್ತದೆ.
ಆಹಾರ, ನೀರು ಸೇವನೆ ಅಥವಾ ಸಾಮಾನ್ಯವಾಗಿ ಬಾಯಿಯನ್ನು ಸ್ಪರ್ಶಿಸುವ ಮೂಲಕ, ಈ ಮೊಟ್ಟೆಗಳು ಬಾಯಿಯನ್ನು ತಲುಪಿ ದೇಹದೊಳಗೆ ಹೋಗುತ್ತವೆ. ಇದರ ಪರಿಣಾಮವಾಗಿ ವ್ಯಕ್ತಿಯು ವಾಕರಿಕೆ, ವಾಂತಿ ಮತ್ತು ಪೀಡಿತ ಪ್ರದೇಶದಲ್ಲಿ ನೋವಿನ ಲಕ್ಷಣಗಳು ಕಂಡು ಬರುತ್ತವೆ.
ಇದನ್ನೂ ಓದಿ:16ರ ಬಾಲಕ 70 ರ ವೃದ್ಧನಂತೆ ವರ್ತನೆ.. ಇದು ಕೋವಿಡ್ ನೀಡಿದ ಮರ್ಮಾಘಾತ