ಅಲಿಗಢ:ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡವೊಂದು 'ಜಾಕ್ಡಾ' ಎಂಬ ತ್ರಿಚಕ್ರವುಳ್ಳ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವನ್ನು ರೂಪಿಸಿದ್ದಾರೆ.
ಇದು ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಗಾಳಿಯ ಗುಣಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದು ರಾಷ್ಟ್ರಮಟ್ಟದ ವಿನ್ಯಾಸ ಸ್ಪರ್ಧೆಯಲ್ಲಿ 'ಎಫಿಸೈಕಲ್' ವಿಭಾಗದಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.
ಸೈಯದ್ ತೈಮೂರ್ ಅಲಿ (ನಾಯಕ), ಅನಂತ್ ಅಗರ್ವಾಲ್ (ಉಪನಾಯಕ), ಮೊಹಮ್ಮದ್ ಸೈಫ್ ಉಸ್ಮಾನಿ (ಮ್ಯಾನೇಜರ್), ಅಭಿಷೇಕ್ ಕುಮಾರ್ (ಖಜಾಂಚಿ), ಅರ್ಕಮ್ ಹಾಶಿಮ್ ಸಿದ್ದಿಕಿ, ಹಸಮ್ ಖುರ್ಷಿದ್, ಹರ್ಷ್ ವರ್ಷಿ, ಮೊಹಮ್ಮದ್ ಸಮೀರ್, ಮೊಹಮ್ಮದ್ ಸೊಹೈಲ್ ಎಲೆಕ್ಟ್ರಿಕ್ ವಾಹನ ತಯಾರಿಕಾ ತಂಡದ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಯಲ್ಲಾಪುರದ ಮರ ಕೆತ್ತನೆ ದೇಶ, ವಿದೇಶಗಳಲ್ಲೂ ಪ್ರಖ್ಯಾತಿ.. ಅಮೆರಿಕದ ದೇವಾಲಯಕ್ಕೆ ಬಾಗಿಲು ಮಾಡಿಕೊಟ್ಟ ಹೆಗ್ಗಳಿಕೆ
ವಾಹನಗಳ ತಯಾರಕ ಸಂಸ್ಥೆಗಳು ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಆಸ್ಥೆ ವಹಿಸುತ್ತಿವೆ. ಇದು ನಮ್ಮನ್ನು ಪ್ರೇರೇಪಿಸಿ ಕಾರಿನ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಒಳಗೊಂಡಂತೆ ಏರೋಡೈನಾಮಿಕ್ ವಾಹನದ ಕಲ್ಪನೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ತಂಡ ತಿಳಿಸಿದೆ.
ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS), ಸೀಟ್ ಬೆಲ್ಟ್ ರಿಮೈಂಡರ್, ಹೆಡ್‌ಲ್ಯಾಂಪ್‌ಗಳು, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇತರ ವಿಶ್ವಾಸಾರ್ಹ ಸುರಕ್ಷತಾ ವಿಧಾನಗಳನ್ನು ಒಳಗೊಂಡ ವೈಶಿಷ್ಟ್ಯಗಳೊಂದಿಗೆ ವಾಹನವನ್ನು ವಿನ್ಯಾಸಗೊಳಿಸಲಾಗಿದೆ.
ಇದಕ್ಕೆ ವಿವಿಯ ಪ್ರಾಧ್ಯಾಪಕರಾದ ನಫೀಸ್ ಅಹಮದ್ ಮತ್ತು ಡಾ. ಸೈಯದ್ ಫಹಾದ್ ಅನ್ವರ್ ಅವರ ಮಾರ್ಗದರ್ಶನವಿದೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.